ಮಂಗಳೂರು: ಯುವಕ ನಾಪತ್ತೆ

ಮಂಗಳೂರು, ನ.3: ವ್ಯಕ್ತಿಯೊಬ್ಬರಿಂದ ಹಣ ತೆಗೆದುಕೊಂಡು ಬರಲು ಹೋಗಿದ್ದ ಯುವಕನೋರ್ವ ವಾಪಸಾಗದೆ ನಾಪತ್ತೆಯಾದ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ಬಜ್ಪೆ ಕೊಳಮಾರು ನಿವಾಸಿ ಹಸೈನಾರ್ (36) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದ್ದು, ಆ.10ರಂದು ಯುವಕ ನಾಪತ್ತೆಯಾಗಿದ್ದಾನೆ.
ಯುವಕನು ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ. ಆ.10ರಂದು ಯುವಕ ಹಾಗೂ ಆತನ ಪತ್ನಿ ಇಬ್ಬರು ಸೇರಿ ಪತ್ನಿಯ ಅಣ್ಣನ ಮದುವೆಗಾಗಿ ಮಂಗಳೂರಿಗೆ ಬಟ್ಟೆ ತರಲು ಹೊರಟು ಕೆಪಿಟಿಗೆ ಇಳಿದುಕೊಂಡಿದ್ದಾರೆ. ಯುವಕನಿಗೆ ವ್ಯಕ್ತಿಯೋರ್ವರು ಹಣ ಕೊಡಲು ಬಾಕಿಯಿದ್ದ ಹಿನ್ನೆಲೆ ದಂಪತಿ ಕಂಕನಾಡಿಯ ಖಾಸಗಿ ಆಸ್ಪತ್ರೆಯೊಂದರ ಬಳಿ ಬಂದಿದ್ದಾರೆ.
ಆಗ ಯುವಕನು ‘ನೀನು ಇಲ್ಲೇ ಇರು, ನಾನು, ಈಗ ಐದು ನಿಮಿಷದಲ್ಲಿ ಬಂದು ಬಿಡುತ್ತೇನೆ’ ಎಂದು ಪತ್ನಿಗೆ ಹೇಳಿ ಹೋಗಿದ್ದರು. ನಂತರ ಯುವಕನಿಗೆ ಪತ್ನಿ ಕರೆ ಮಾಡಿದರೆ ಮೊಬೈಲ್ ಸ್ವೀಚ್‌ಆಫ್ ಎಂದು ಬಂದಿದೆ. ಈ ಬಗ್ಗೆ ಸಂಬಂಧಿಕರಲ್ಲಿ, ಮಂಗಳೂರು ಸುತ್ತಮುತ್ತ ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಹರೆ: ನಾಪತ್ತೆಯಾದ ಯುವಕನಿಗೆ ಎಡಭುಜದ ಹಿಂದೆ ಅಪಘಾತವಾದ ಗಾಯದ ಗುರುತು ಇದೆ. ಈತ 5.3 ಅಡಿ ಎತ್ತರವಿದ್ದು, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ನೀಲಿ ಜೀನ್ಸ್ ಪ್ಯಾಂಟ್ ಹಾಗೂ ಬಿಳಿಬಣ್ಣದ ಉದ್ದತೋಳಿನ ಅಂಗಿಯನ್ನು ಧರಿಸಿದ್ದರು. ಹಿಂದಿ, ಕನ್ನಡ, ತುಳು ಮತ್ತು ಮಲೆಯಾಳಿ ಭಾಷೆಯನ್ನು ಮಾತನಾಡುತ್ತಾರೆ.
ನಾಪತ್ತೆಯಾದ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ (0824- 2220518)ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







