13ನೇ ಚಿನ್ನದ ಪದಕ ಜಯಿಸಿ ದಾಖಲೆ ನಿರ್ಮಿಸಿದ ಸಿಮೋನ್ ಬೈಲ್ಸ್
ವಿಶ್ವ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್

ದೋಹಾ, ನ.3: ಅಮೆರಿಕದ ಸಿಮೋನ್ ಬೈಲ್ಸ್ ವಿಶ್ವ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 13ನೇ ಸ್ವರ್ಣ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ.
21ರ ಹರೆಯದ ಬೈಲ್ಸ್ ಶುಕ್ರವಾರ ನಡೆದ ವೋಲ್ಟ್ ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದರು. ಈ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಪ್ರಶಸ್ತಿ ಜಯಿಸಿದ ಸಿಮೋನ್ 1996ರಲ್ಲಿ ಬೆಲಾರಸ್‌ನ ಪುರುಷ ಜಿಮ್ನಾಸ್ಟ್ ವಿಟಾಲಿ ಶೆರ್ಬೊ ನಿರ್ಮಿಸಿದ್ದ ಸಾರ್ವಕಾಲಿಕ ದಾಖಲೆಯನ್ನು ಮುರಿದರು. ಜಿಮ್ನಾಸ್ಟಿಕ್ಸ್‌ನ ವೋಲ್ಟ್ ಸ್ಪರ್ಧೆಯಲ್ಲಿ ವಿಶ್ವ ಶ್ರೇಷ್ಠ ಆಟಗಾರ್ತಿಯಾಗಿರುವ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಬೈಲ್ಸ್ ಒಟ್ಟು 15.366 ಅಂಕ ಗಳಿಸಿ ಚಿನ್ನ ಜಯಿಸಿದರು. ಕೆನಡಾದ ಶಾಲ್ಲೊನ್ ಒಲ್ಸೆನ್ ಹಾಗೂ ಮೆಕ್ಸಿಕೊದ ಅಲೆಕ್ಸಾ ಮೊರೆನೊ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.
ಸಿಮೊನ್ ಗುರುವಾರ ಎಲ್ಲ ನಾಲ್ಕು ಆಲ್‌ರೌಂಡ್ ವಿಶ್ವ ಪ್ರಶಸ್ತಿಯನ್ನು ಜಯಿಸಿದ ಮೊದಲ ಮಹಿಳಾ ಜಿಮ್ನಾಸ್ಟ್ ಎನಿಸಿಕೊಂಡು ದಾಖಲೆ ಬರೆದಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 4 ಚಿನ್ನ ಪದಕ ಜಯಿಸಿ ವಿಶ್ವದ ಗಮನ ಸೆಳೆದಿದ್ದ ಬೈಲ್ಸ್ ಆ ಬಳಿಕ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿರಲಿಲ್ಲ. ಇಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗಿಂತ ಮೊದಲು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ಸಿಮೋನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.







