ಡೇವಿಡ್ ಜಾನ್, ಮರ್ಜಿನ್ ನನ್ನ ವೃತ್ತಿ ಜೀವನಕ್ಕೆ ಮಾರಕವಾದರು:ವೌನಮುರಿದ ಸರ್ದಾರ್ ಸಿಂಗ್

ಭುವನೇಶ್ವರ, ನ.3: ಈ ವರ್ಷಾರಂಭದಲ್ಲಿ ಏಶ್ಯನ್ ಗೇಮ್ಸ್ ಕೊನೆಗೊಂಡ ಬಳಿಕ ನಿವೃತ್ತಿ ಘೋಷಿಸಿದ್ದ ಭಾರತದ ಮಾಜಿ ನಾಯಕ ಸರ್ದಾರ್ ಸಿಂಗ್, ತನ್ನ ನಿರ್ಧಾರಕ್ಕೆ ಕಾರಣ ಏನೆಂಬ ಬಗ್ಗೆ ಇದೀಗ ಬಹಿರಂಗಪಡಿಸಿದ್ದಾರೆ.
ತಾನು ವೃತ್ತಿಜೀವನವನ್ನು ದಿಢೀರ್ ಕೊನೆಗೊಳಿಸಲು ಹಾಕಿ ಇಂಡಿಯಾದ ಉನ್ನತ ಪ್ರದರ್ಶನ ನಿರ್ದೇಶಕ ಡೇವಿಡ್ ಜಾನ್ ಹಾಗೂ ಕೋಚ್ ಜೊಯೆರ್ಡ್ ಮರ್ಜಿನ್ ಕಾರಣ ಎಂದು ಆರೋಪಿಸಿದ್ದಾರೆ.
ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನ ಸೆಮಿ ಫೈನಲ್‌ನಲ್ಲಿ ಸೋತಿದ್ದ ಭಾರತ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಕಂಚು ಜಯಿಸಿತ್ತು. ಆದರೆ ಕಳೆದ ಒಂದು ವರ್ಷದಿಂದ ನಡೆದ ಘಟನೆಗಳು ಸರ್ದಾರ್ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿದೆ.
ಹಾಕಿ ಇಂಡಿಯಾ ರೊಲ್ಯಾಂಟ್ ಒಲ್ಟಮನ್ಸ್‌ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ತಾನು ಸಮಸ್ಯೆ ಎದುರಿಸಲಾರಂಭಿಸಿದ್ದೆ. ನನ್ನ ನಿವೃತ್ತಿಯ ಹಿಂದೆ ಹಲವಾರು ಕಾರಣಗಳಿವೆ. ಒಲ್ಟಮನ್ಸ್‌ರನ್ನು ಕೋಚ್ ಹುದ್ದೆಯಿಂದ ತೆಗೆದುಹಾಕಿದ ಬಳಿಕ ಹಲವು ಘಟನೆಗಳು ನಡೆದವು. ಜಾನ್ ಹಾಗೂ ಇನ್ನೋರ್ವ ವಿದೇಶಿ ಕೋಚ್(ಮರ್ಜಿನ್)ಹೊಸ ಆಟಗಾರರಿಗೆ ಅವಕಾಶ ನೀಡಲು ಯತ್ನಿಸಿದರು. ನಾವು 2017ರಲ್ಲಿ ಏಶ್ಯಾಕಪ್‌ನ್ನು ಜಯಿಸಿದ್ದೆವು. ನಾನು ಹಾಕಿಯಲ್ಲಿ ಮುಂದುವರಿಯುವ ವಿಶ್ವಾಸದಲ್ಲಿದ್ದೆ. ಆದರೆ, ಯಾವುದೇ ಚರ್ಚೆಯಿಲ್ಲದೆ ನನ್ನನ್ನು ತಂಡದಿಂದ ಕೈಬಿಡಲಾಯಿತು. ಆ ಬಳಿಕ ನನ್ನನ್ನು ಕೆಲವು ಜೂನಿಯರ್ ಆಟಗಾರರೊಂದಿಗೆ ಈ ವರ್ಷ ನಡೆದ ಸುಲ್ತಾನ್ ಅಝ್ಲಾನ್ ಹಾಕಿ ಕಪ್ ಟೂರ್ನಿಗೆ ಕಳುಹಿಸಿಕೊಡಲಾಗಿತ್ತು. ಆ ಟೂರ್ನಿಯಿಂದ ವಾಪಸಾದ ಬಳಿಕ ನನ್ನನ್ನು ಮತ್ತೊಮ್ಮೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಕಡೆಗಣಿಸಲಾಯಿತು. ನಾನು ಫಿಟ್ ಆಗಿದ್ದರೂ ತಂಡಕ್ಕೆ ಆಯ್ಕೆಯಾಗದೇ ಇದ್ದ ಸಂದರ್ಭದಲ್ಲಿ ನಾನು ನನ್ನ ಬಗ್ಗೆಯೇ ಸಂಶಯಪಡಲಾರಂಭಿಸಿದ್ದೆ, ಪ್ರಶ್ನಿಸಿಕೊಳ್ಳಲಾರಂಭಿಸಿದ್ದೆ ಎಂದು ಭಾರತ ಕಂಡ ಶ್ರೇಷ್ಠ ಮಿಡ್‌ಫೀಲ್ಡರ್ ಸರ್ದಾರ್ ಹೇಳಿದ್ದಾರೆ.







