ಉತ್ತರ ಪ್ರದೇಶ: ಐಸಿಯುನಲ್ಲಿದ್ದ ಬಾಲಕಿಯ ಸಾಮೂಹಿಕ ಅತ್ಯಾಚಾರ
ಬರೇಲಿ, ನ.4: ಐಸಿಯುನಲ್ಲಿದ್ದ ಬಾಲಕಿಯೊಬ್ಬಳನ್ನು ಆಸ್ಪತ್ರೆಯ ಕೆಲಸಗಾರ ಮತ್ತು ಇತರ ನಾಲ್ವರು ಅತ್ಯಾಚಾರಗೈದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಡಿತಕ್ಕೊಳಗಾದ ಬಾಲಕಿಯನ್ನು ಐದು ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
“ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಿದ ನಂತರ ಆಕೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವಿವರಿಸಿದಳು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಮವಸ್ತ್ರದಲ್ಲಿದ್ದ ಓರ್ವ ವ್ಯಕ್ತಿ ಹಾಗು ಇತರ ನಾಲ್ವರು ರಾತ್ರಿ ವೇಳೆ ಐಸಿಯುಗೆ ನುಗ್ಗಿದ್ದರು. ತನಗೆ ಚುಚ್ಚುಮದ್ದು ನೀಡಿ ಕೈಗಳನ್ನು ಕಟ್ಟಿ ಹಾಕಿ ಅತ್ಯಾಚಾರಗೈದರು ಎಂದು ಬಾಲಕಿ ತನ್ನ ಅಜ್ಜಿಗೆ ತಿಳಿಸಿದ್ದಳು. ಕೂಡಲೇ ಅಜ್ಜಿ ವೈದ್ಯರಿಗೆ ಈ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Next Story