ಯಕ್ಷಗಾನ ಉಳಿಸಲು ಗಂಭೀರ ಚಿಂತನೆ ಅಗತ್ಯ: ತಲ್ಲೂರು

ಉಡುಪಿ, ನ.4: ಮಣಿಪಾಲದ ಸರಳೆಬೆಟ್ಟು ಯಕ್ಷಮಂದಿರದಲ್ಲಿ ಸರಳಬೆಟ್ಟು ಮಿತ್ರ ಯಕ್ಷಗಾನ ಮಂಡಳಿ, ಮಿತ್ರ ಕಲಾನಿಕೇತನ ಟ್ರಸ್ಟ್ ಮತ್ತು ಯಕ್ಷ ಮಿತ್ರ ತರಬೇತಿ ಕೇಂದ್ರದ ಸ್ಥಾಪಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯ ಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಇಂದು ಯಕ್ಷಗಾನ ಕ್ಷೇತ್ರವು ನಶಿಸುವ ಆತಂಕ ದಲ್ಲಿದ್ದು ಅದನ್ನು ಉಳಿಸುವಲ್ಲಿ ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಗಂಭೀರವಾದ ಚಿಂತನೆಗಳನ್ನು ಮಾಡಬೇಕು. ಅಲ್ಲದೆ ಅದಕ್ಕೆ ಪೂರಕವಾಗಿ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು. ಅದೇ ರೀತಿ ಸರಕಾರಗಳು ಮತ್ತು ಇತರ ಸಾಮಾಜಿಕ ಸಂಸ್ಥೆಗಳು ಈ ಬಗ್ಗೆ ಸಾಕಷ್ಟು ಪ್ರೋತ್ಸಾಹ ಸೌಲಭ್ಯ ಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರಾದ ಸರ್ವೋತ್ತಮ ಪರ್ಕಳ, ಮೋಹನ್ ಪೆರ್ಡೂರು, ವಿಶ್ವನಾಥ್ ನಾಯಕ್ ಬಡಗು ಬೆಟ್ಟು ಹಾಗು ನೂತನ ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ,್ತ ಮಂಜುನಾಥ್ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲ ವಿಶ್ವವಿದ್ಯಾನಿಲಯದ ಅಧಿಕಾರಿ ಕೆ.ಎಸ್.ಜೈವಿಠಲ್, ಯು. ಸೋಮಪ್ಪದೇವಾಡಿಗ, ಸುಬ್ರಹ್ಮಣ್ಯ ಪೈ, ಅಶೋಕ್ ಸಾಮಂತ್, ಸಚ್ಚಿದಾನಂದ ನಾಯಕ್ ಬೆಳ್ವತ್ರೆ, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಪಿ. ವಂದಿಸಿದರು. ಸಂಸ್ಥೆಯ ಸಂಯೋಜಕ ಪ್ರಕಾಶ್ ಶಾನಭಾಗ್ ಕಾರ್ಯಕ್ರಮ ನಿರೂಪಿಸಿದರು.







