ಇದೇ ತಿಂಗಳಲ್ಲಿ ರೈತರಿಗೆ ಋಣಮುಕ್ತ ಪತ್ರ: ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ, ನ. 4: ರಾಜ್ಯದಲ್ಲಿನ ರೈತರ ಕೃಷಿ ಸಾಲಮನ್ನಾ ವಿಚಾರ ಸಂಬಂಧ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ಒಪ್ಪಿಗೆ ನೀಡಿದ್ದು, ಇದೇ ತಿಂಗಳಲ್ಲಿ ರೈತರಿಗೆ ಋಣಮುಕ್ತ ಪತ್ರ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ರವಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೆ ಬ್ಯಾಂಕುಗಳು ನೋಟಿಸ್ ನೀಡುತ್ತಿರುವ ವಿಚಾರ ಗೊತ್ತಿಲ್ಲ. ಇದರ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ರೈತರಿಗೆ ಋಣಮುಕ್ತ ಪತ್ರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಗೆಲುವು ನಮ್ಮದೆ: ಉಪ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಜಮಖಂಡಿ ಮತ್ತು ಬಳ್ಳಾರಿಯಲ್ಲಿ ಗೆಲುತ್ತೇವೆ. ಮಂಡ್ಯ ಹಾಗೂ ರಾಮನಗರದಲ್ಲಿ ಸುಲಭವಾಗಿ ಗೆಲುವು ನಮ್ಮದಾಗುತ್ತೆ. ಇನ್ನು ಶಿವಮೊಗ್ಗದಲ್ಲಿ ಪೈಪೋಟಿ ಇದೆ. ಆದರೂ, ಗೆಲುವು ನಮ್ಮದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆ: ರಾಜ್ಯದಲ್ಲಿನ ಮೈತ್ರಿ ಸರಕಾರ ಸುಭದ್ರವಾಗಿದ್ದು, ದೀಪಾವಳಿ ಹಬ್ಬದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.
ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರು ಹುಲಿ ಎಂದೇ ಖ್ಯಾತಿಗಳಿಸಿರುವ ಟಿಪ್ಪು ಸುಲ್ತಾನ್ ಜಯಂತಿ ಮೂರು ವರ್ಷಗಳಿಂದ ಆಚರಣೆ ಮಾಡಲಾಗುತ್ತಿದೆ. ಈ ವರ್ಷವೂ ಅದೇ ರೀತಿಯಲ್ಲೇ ಟಿಪ್ಪು ಜಯಂತಿ ಆಚರಣೆ ಮಾಡಲಾಗುವುದು ಎಂದ ಅವರು, ಬಿಜೆಪಿ ಟಿಪ್ಪು ಜಯಂತಿ ನೆಪದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂದು ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಬೇರೆ ಯಾವುದೇ ಕನಸು ಬೀಳುವುದಿಲ್ಲ. ಅವರಿಗೆ ಯಾವಾಗಲೂ ವಿಧಾನಸೌಧದ ಮೂರನೆ ಮಹಡಿ ಕನಸೇ ಬೀಳುತ್ತದೆ. ಆರಂಭದಿಂದಲೂ ಅವರು ಅಧಿಕಾರದ ಭ್ರಮೆಯಲ್ಲಿದ್ದು, ಅದು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ’
-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ







