ಆಕಾಶವಾಣಿ ಕುರಿತ ಸವಿಸ್ತಾರವಾದ ಕೃತಿ ‘ನುಡಿನುಡಿತ’: ನಾ.ದಾಮೋದರ ಶೆಟ್ಟಿ

ಬೆಂಗಳೂರು, ನ.4: ಲೇಖಕಿ ನಾರಾಯಣೀ ದಾಮೋದರ್ ಅಕಾಶವಾಣಿಯಲ್ಲಿ 32 ವರ್ಷ ಕಾರ್ಯನಿರ್ವಹಿಸಿದ ತಮ್ಮ ಅನುಭವಗಳನ್ನು ‘ನುಡಿನುಡಿತ’ ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ನಾ.ದಾಮೋದರ ಶೆಟ್ಟಿ ತಿಳಿಸಿದರು.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಲೇಖಕಿ ನಾರಾಯಣೀ ದಾಮೋದರ್‌ರವರ ‘ನುಡಿನುಡಿತ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಕಾಶವಾಣಿ ಮಾಧ್ಯಮ ಸಂಸ್ಥೆಯಲ್ಲಿರುವ ಭ್ರಷ್ಟಾಚಾರ, ಹಿರಿಯ ಉದ್ಯೋಗಿಗಳ ಸಣ್ಣತನಗಳನ್ನು ‘ನುಡಿನುಡಿ’ ಕೃತಿಯಲ್ಲಿ ವಿವರಿಸಲಾಗಿದೆ. ಆ ಮೂಲಕ ಲೇಖಕಿ ನಾರಾಯಣೀ ದಾಮೋದರ್ ವ್ಯಕ್ತಿಗಳ ನಕರಾತ್ಮಕ ಚಿಂತನೆಗಳನ್ನು ಸಾಮಾಜಿಕ ನೆಲೆಯಲ್ಲಿ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಹಿಂದಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಮುಕ್ತ ಸ್ವಾತಂತ್ರ ಇರುತ್ತಿರಲಿಲ್ಲ. ಆದರೂ, ಅವೆಲ್ಲ ಚೌಕಟ್ಟುಗಳನ್ನು ಮೀರಿ ಲೇಖಕಿ ನಾರಾಯಣೀ ದಾಮೋದರ್, ಬಾಲ್ಯದಲ್ಲಿಯೆ ರಂಗಚಟುವಟಿಕೆಗಳಲ್ಲಿ ತೊಡಗಿದ್ದರು. ಹಾಗೂ ತಂದೆಯ ಮೂಲಕ ಹರಿಕತೆಗಾರ್ತಿಯಾಗಿ ಸೃಜನಾತ್ಮಕವಾಗಿ ಬೆಳೆದರು. ನಂತರ ಅಕಾಶವಾಣಿಯಲ್ಲಿ ಸುಮಾರು 32 ವರ್ಷ ಸೇವೆ ಸಲ್ಲಿಸಿ, ಸಾರ್ವಜನಿಕರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಪ್ರಸನ್ನಕುಮಾರ್ ಮಾತನಾಡಿ, ಲೇಖಕಿ ನಾರಾಯಣೀ ದಾಮೋದರ ಅವರ ವ್ಯಕ್ತಿತ್ವ ವಿಶೇಷವಾದದ್ದು, ತಮ್ಮ ಬಾಲ್ಯದ ಅನುಭವಗಳನ್ನು ‘ನುಡಿನುಡಿ’ ಕೃತಿಯಲ್ಲಿ ಚಿತ್ರೀಕರಿಸಿರುವುದು ಮನಕ್ಕೆ ತಾಕುವಂತಿದೆ ಎಂದು ಬಣ್ಣಿಸಿದರು.
ಪ್ರತಿಯೊಬ್ಬರ ಬದುಕಿನಲ್ಲೂ ಬಾಲ್ಯ ಎಷ್ಟು ಮುಖ್ಯವೆಂಬುದನ್ನು ನುಡಿನುಡಿತ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಬಾಲ್ಯ ಜೀವನ ಸೃಜನಾತ್ಮಕವಾಗಿ ಬೆಳಗಬೇಕಾದರೆ, ಪೋಷಕರ ಪಾತ್ರ ಮುಖ್ಯವಾದದ್ದಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ಹೆಣ್ಣೊಬ್ಬಳು ಆತ್ಮಕತೆ ಬರೆಯುವುದು ಸುಲಭವಲ್ಲ. ತಮ್ಮ ಬದುಕಿನಲ್ಲಾದ ಸತ್ಯ ಘಟನೆಗಳನ್ನೆ ಬರೆಯಲಾಗದಷ್ಟು ಬಿಕ್ಕಟ್ಟು ಎದುರಾಗುತ್ತದೆ. ಅಂತಹ ಪರಿಸ್ಥಿತಿಯಲ್ಲೂ ಲೇಖಕಿ ನಾರಾಯನೀ ದಾಮೋದರ್ ತಮ್ಮ ಬದುಕಿನ ಅನುಭನಗಳನ್ನು ನುಡಿನುಡಿತ ಕೃತಿಯಲ್ಲಿ ನಿರ್ಭೀಡೆಯಿಂದ ವ್ಯಕ್ತಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಲೇಖಕಿ ನಾರಾಯನೀ ದಾಮೋದರ ಉಪಸ್ಥಿತರಿದ್ದರು. ಕಾದಂಬರಿಗಾರ್ತಿ ಆಶಾ ರಘು ನಿರೂಪಿಸಿದರು.







