ಕವಿತೆಗಳಲ್ಲಿ ಮೌನದ ಹುಡುಕಾಟ ಮುಖ್ಯ: ಸುಬ್ರಾಯ ಚೊಕ್ಕಾಡಿ
ಲಿಟ್‌ಫೆಸ್ಟ್‌ನಲ್ಲಿ ಕವಿಗೋಷ್ಠಿ

ಮಂಗಳೂರು, ನ.4: ಮಾತಿನ ವಿಜೃಂಭಣೆಯ ಮಧ್ಯೆ ತಲೆಮರೆಸಿಕೊಂಡಿರುವ ಮೌನವನ್ನು ಹಿಡಿಯುವ ಕೆಲಸ ಕವಿಯಾದವ ಮಾಡಬೇಕಾಗಿದೆ. ಆದರೆ ಕೆಲವು ಕಾರಣಗಳಿಂದ ಕವಿಗಳಿಗಿದು ಕ್ಲಿಷ್ಟ ಕಾಲವಾಗಿದೆ. ಕವಿತೆಗಳಲ್ಲಿ ವೌನದ ಹುಡುಕಾಟ ಮುಖ್ಯವಾಗಿದೆ. ಈ ವೌನವನ್ನು ಕವಿಗೋಷ್ಠಿಯಲ್ಲಿ ಮಂಡಿಸ ಲಾದ ಕವಿತೆಗಳಲ್ಲಿ ಕಾಣಬಹುದಾಗಿದೆ ಎಂದು ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟರು.
ಮಂಗಳೂರು ಲಿಟ್‌ಫೆಸ್ಟ್ ನಗರದ ಟಿಎಂಎ ಪೈ ಹಾಲ್‌ನಲ್ಲಿ ರವಿವಾರ ಆಯೋಜಿಸಲಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದ ಪರಿಕಲ್ಪನೆಯಲ್ಲಿ ಏಕತೆ ಮತು ಅನೇಕತೆ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಏಕತೆ ಗಟ್ಟಿಯಾದ ಹಾಗೆ ಅನೇಕತೆ ಅದರ ವಿರುದ್ಧ ಸಡ್ಡು ಹೊಡೆಯುತ್ತಿದೆ. ಜತೆಗೆ ಅಖಂಡ ಭಾರತ ಎಂದು ಹೇಳುತ್ತಿರುವಾಗಲೇ ಖಂಡ ಭಾರತದ ಚಿಂತನೆಗಳೂ ಅಲ್ಲಲ್ಲಿ ನಡೆಯಲು ಆರಂಭವಾಗಿದೆ. ಖಂಡ ಭಾರತದ ಶಕ್ತಿ ಹೆಚ್ಚಾಗುತ್ತಲೇ ಅಖಂಡ ಭಾರತ ಬೇಕು ಎಂಬ ಚಿಂತನೆಗಳನ್ನು ನಾವು ಮಾಡುತ್ತಿದ್ದೇವೆ. ಈ ಖಂಡ-ಅಖಂಡದ ಚಿಂತನೆಯ ನಡುವೆ ದೇಶ ಅವ್ಯಕ್ತ ಭಾರತವಾಗಿ ಬಿಡುತ್ತೋ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎಂದು ಸುಬ್ರಾಯ ಚೊಕ್ಕಾಡಿ ನುಡಿದರು.
ಇದೇ ವೇಳೆ ಸುಬ್ರಾಯ ಚೊಕ್ಕಾಡಿ ತನಗೆ ಬಹಳವಾಗಿ ಕಾಡುವ ಹಕ್ಕಿ ಹಾಗೂ ಮರದ ಕುರಿತು ರಚಿಸಿದ ‘ಹಂಗು’ ಕವನ ವಾಚಿಸಿದರು. ಹಾಗೇ ‘ಬೆಳಕ ಭ್ರೂಹಿತ ನೆನಪು’ ಕವನದಲ್ಲಿ ಕಳೆದ ದೀಪಾವಳಿಯಲ್ಲಿ ಬೆಳಕು ಮತ್ತು ಕತ್ತಲೆಯ ನಡುವೆ ಹೇಗೆ ಸಂಘರ್ಷ ನಡೆಯಿತು ಎಂಬುದನ್ನು ವಿವರಿಸಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಪೂರ್ಣಿಮಾ ಸುರೇಶ್ ಅವರ ‘ಮೀನ್ಮನೆಯ ಮೀನಿನ ಹಾಗೆ’, ‘ಗಂಡಾಗುವುದು ಕಲಿತಿಲ್ಲ’, ‘ಸಂವಿಧಾನ ಶಿಲ್ಪಿ ನೀವು ನೆನಪಾಗುತ್ತೀರಿ’ ಕವನಗಳು ಪ್ರಸ್ತುತ ಸನ್ನಿವೇಶಗಳು ಕುರಿತು ಮಾತನಾಡಿತು. ಡಾ.ಧನಂಜಯ ಕುಂಬ್ಳೆ ಅವರ ‘ಕೆಂಪುದೀಪದಡಿ ಮೀಟೂ ರೋಧನ’, ‘ಕೂಗಿದರೂ ದನಿ ಕೇಳಲಿಲ್ಲವೇ’, ನಂದಿನಿ ಹೆಗ್ಗುರ್ದ ಅವರ ‘ನೀಲಿ’, ‘ಬಹುರೂಪಿ’, ‘ನೀನು’, ಡಾ. ವಸಂತ ಕುಮಾರ್ ಪೆರ್ಲ ಅವರ ‘ದಂಡಯಾತ್ರೆ’, ಭೋಜರಾಜನ ‘ಸಿಂಹಾಸನ’, ‘ಮಂತ್ರವಾಗಲಿ ಮಾತು’ ಕವನಗಳು ಗಮನ ಸೆಳೆಯಿತು. ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಅವರ ‘ನವಿಲು ಮತ್ತು ಮುಳ್ಳುಹಂದಿ’, ‘ಅಂಕಲ್ ಮತ್ತು ಟ್ವಿಂಕಲ್ ನಡುವಿನ ಸಂಭಾಷಣೆ’, ಭಾರತದ ಪರಿಕಲ್ಪನೆ ಕುರಿತು ‘ಹಿಂದುತ್ವ ಎಂದರೇನು’ ಕವನಗಳು ಸಾಹಿತ್ಯಾಸಕ್ತರನ್ನು ಸೆಳೆಯಿತು.
ಹನಿಗವಿ ಎಚ್.ಡುಂಡಿರಾಜ್ ಕಾರ್ಯಕ್ರಮ ನಿರೂಪಿಸಿ, ಹನಿಗವನಗಳನ್ನು ವಾಚಿಸಿದರು.







