ನಿರುದ್ಯೋಗ, ಆರ್ಥಿಕ ಸಮಸ್ಯೆ ಹೋಗಲಾಡಿಸುವಲ್ಲಿ ಕೇಂದ್ರ ಸರಕಾರ ವಿಫಲ: ಚಿಂತಕ ಡಾ.ಜಿ.ರಾಮಕೃಷ್ಣ

ಬೆಂಗಳೂರು, ನ.4: ದೇಶದ ಬಗ್ಗೆ ಅಭಿಮಾನ, ಪ್ರೀತಿ ಇದೇ ಎಂದು ತೋರಿಸಿಕೊಳ್ಳುವ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ನಿರುದ್ಯೋಗ, ಬಡತನ ಹಾಗೂ ಆರ್ಥಿಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸೋತಿದೆ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಗಾಂಧಿ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಆಯೋಜಿಸಿದ್ದ ಮೋದಿ ಆಡಳಿತ-ಒಂದು ವಿಮರ್ಶೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಭದ್ರತೆಗಾಗಿ ಎನ್‌ಡಿಎ ಸರಕಾರವು ಪೇಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚು ಮಾಡುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಸ್ಥಳೀಯವಾಗಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಈ ಕೇಂದ್ರ ಸರಕಾರವು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಣ ಹಾಕುವುದು, ಉದ್ಯೋಗ ಸೃಷ್ಠಿ ಸೇರಿ ಇನ್ನಿತರ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಸೋತಿದೆ ಎಂದು ಹೇಳಿದರು.
ಕೋರ್ಟ್‌ಗಳು ದೇವಸ್ಥಾನಗಳಿಗೆ ಸಂಬಂಧಪಟ್ಟಂತೆ ಯಾವುದಾದರೂ ತೀರ್ಪುಗಳನ್ನು ನೀಡಿದರೆ ಬಿಜೆಪಿಯ ಶಾಸಕರು ಹಾಗೂ ಸಂಸದರುಗಳು ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಆದರೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಗಲಿ ಪ್ರಧಾನಿ ನರೇಂದ್ರ ಮೋದಿ ಆಗಲಿ ಬಿಜೆಪಿ ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಮಾತನಾಡಬೇಡಿ ಎಂದು ಕಿವಿಮಾತನ್ನೂ ಹೇಳುವುದಿಲ್ಲ. ಇಂತಹ ಹೇಳಿಕೆಗಳನ್ನು ಕೇಳುತ್ತಿದ್ದರೆ ಈ ದೇಶ ಯಾವ ಧಿಕ್ಕಿನ ಕಡೆಗೆ ಸಾಗುತ್ತಿದೆ ಎಂಬುದರ ಬಗ್ಗೆ ಜನರಲ್ಲಿ ಗೊಂದಲಗಳು ಮೂಡುತ್ತಿವೆ ಎಂದು ಮಾರ್ಮಿಕವಾಗಿ ನುಡಿದರು.
ಎನ್‌ಡಿಎ ಸರಕಾರದ ತಪ್ಪು ನಿರ್ಣಯಗಳನ್ನು ಕಂಡು ಬೀದಿಗೆ ಇಳಿದು ಪ್ರತಿಭಟಿಸಿದರೆ ಬಹಳ ಜನರು ಎನ್‌ಡಿಎ ಸರಕಾರಕ್ಕೆ ಆಡಳಿತ ಮಾಡಲು ಸ್ವಲ್ಪ ದಿನ ಕಾಲಾವಕಾಶ ನೀಡಿ ಎಂದು ಹೇಳುತ್ತಾರೆ. ಆದರೆ, ನಮ್ಮ ಕಣ್ಣು ಮುಂದುಗಡೆಯೇ ಅನ್ಯಾಯ ನಡೆಯುತ್ತಿದ್ದರೂ ಅದು ಹೇಗೆ ಸುಮ್ಮನೆ ಕುಳಿತುಕೊಳ್ಳುವುದು, ಮತ್ತೆ ಚುನಾವಣೆ ಬಂದ ಬಳಿಕ ಅವರಿಗೆ ತಕ್ಕ ಪಾಠ ಕಲಿಸಿದರಾಯಿತು ಎಂದು ಕುಳಿತುಕೊಂಡರೆ ಅಷ್ಟೋತ್ತಿಗಾಗಲೇ ದೇಶವೇ ಹಾಳಾಗಿರುತ್ತದೆ ಎಂದು ಕಿಡಿಕಾರಿದರು.
ಶಿಕ್ಷಣ ಕ್ಷೇತ್ರ ತುಂಬಾ ಹಾಳಾಗಿದ್ದು, ಕೆಲ ವಿವಿಗಳು ಮೊದಲೇ ಅತ್ಯುತ್ತಮ ಶ್ರೇಣಿಯ ವಿವಿಗಳು ಎಂದು ಘೋಷಿಸಿಕೊಳ್ಳುತ್ತವೆ. ಆದರೆ, ಬಡ ವಿದ್ಯಾರ್ಥಿಗಳು ಇಂತಹ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಡೊನೇಷನ್ ನೀಡದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದು, ಇಂತಹ ಶಿಕ್ಷಣ ಸಂಸ್ಥೆಗಳಿಗೆ ಸರಕಾರಗಳು ಕಡಿವಾಣ ಹಾಕಬೇಕೆಂದು ತಿಳಿಸಿದರು.
ಮೋದಿ ಆಡಳಿತ ಒಂದು ವಿಮರ್ಶೆ ಕೃತಿ ರಚನೆಕಾರ, ಪತ್ರಕರ್ತ ಡಾ.ಸಿದ್ಧನಗೌಡ ಪಾಟೀಲ್ ಮಾತನಾಡಿ, ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮುಕ್ತ ದೇಶವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದು, ಇವರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲವೇ ಎಂದು ಪ್ರಶ್ನಿಸಿದರು. ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಪಕ್ಷವೆ ಶ್ರೇಷ್ಠ, ನಾನೆ ಶ್ರೇಷ್ಠ ಎಂಬ ಭಾವನೆ ಮೋದಿ ಹಾಗೂ ಮೋದಿ ಭಕ್ತರಲ್ಲಿ ಮೂಡುತ್ತಿದ್ದು, ಈ ರೀತಿಯ ಚಿಂತನೆಗಳು ಅಪಾಯಕಾರಿ. ಎನ್‌ಡಿಎ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲವಾಗಿದ್ದು, ರೈತರಿಗೆ ಮೀಸಲಿಟ್ಟ ಹಣವನ್ನು ಉದ್ಯಮಿಗಳಿಗೆ ಬಳಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಐಟಿಯುಸಿ ಬೆಂಗಳೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ್, ಸಿಪಿಐ ಬೆಂಗಳೂರು ಜಿಲ್ಲಾ ಮಂಡಳಿ ಕಾರ್ಯದರ್ಶಿ ಜಿ.ಬಾಬು, ಮುರಳಿಧರ್, ಎಂ.ಸತ್ಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದದರು.







