ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಲಾರಿ ಚಾಲಕನ ಕೊಲೆ

ಬೆಂಗಳೂರು, ನ.4: ಮಾರಕಾಸ್ತ್ರಗಳಿಂದ ಲಾರಿ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಚಂದಾಪುರದ ಬನ್ನಹಳ್ಳಿಯ ಭಾಸ್ಕರ್ (45) ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಗರದ ತಲಘಟ್ಟಪುರದ 80 ಅಡಿ ರಸ್ತೆಯಲ್ಲಿ ಭಾಸ್ಕರ್ ಅನ್ನು ಮೂರು ದಿನಗಳ ಹಿಂದೆ ಕೊಲೆಗೈದಿರುವ ದುಷ್ಕರ್ಮಿಗಳು ಲಾರಿ ಕೆಳಗೆ ಮೃತದೇಹ ಎಸೆದು ಪರಾರಿಯಾಗಿದ್ದಾರೆ. ದುರ್ವಾಸನೆ ಬರುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಭಾಸ್ಕರ್ ಅವರು ಮೂರು ದಿನಗಳ ಹಿಂದೆ ಉತ್ತರಹಳ್ಳಿಯಲ್ಲಿ ಲಾರಿಯಲ್ಲಿ ತುಂಬಿಕೊಂಡು ಬಂದಿದ್ದ ಸಾಮಗ್ರಿಗಳನ್ನು ಇಳಿಸಿ, ತಲಘಟ್ಟಪುರದ ಕಡೆಗೆ ಬಂದಿದ್ದಾರೆ. ಆ ನಂತರ ಅವರನ್ನು ದುಷ್ಕರ್ಮಿಗಳು ಕೊಲೆಮಾಡಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಕೆಳಗೆ ಮೃತದೇಹ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೊಕದ್ದಮೆ ದಾಖಲು ಮಾಡಿಕೊಂಡಿರುವ ತಲಘಟ್ಟಪುರ ಠಾಣಾ ಪೊಲೀಸರು, ದುಷ್ಕರ್ಮಿಗಳಿಗಾಗಿ ತೀವ್ರಶೋಧ ನಡೆಸಿದ್ದಾರೆಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.







