ಅಕ್ರಮ ಪಿಸ್ತೂಲು ಮಾರಾಟ ಆರೋಪ: ಸಿನೆಮಾ ನಟ ಬಂಧನ

ಬೆಂಗಳೂರು, ನ.4: ಅಕ್ರಮವಾಗಿ ಪಿಸ್ತೂಲು, ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಸಿನೆಮಾ ನಟ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಗಣೇಶ್ ಪೇಟೆಯ ಜಗದೀಶ್.ಎಸ್.ಹೊಸಮಠ(31) ಬಂಧಿತ ಆರೋಪಿ. ಈತ ಕನ್ನಡ ಸಿನೆಮಾ ‘ಸರ್ಕಾರ್’ನಲ್ಲಿ ನಾಯಕ ನಟನಾಗಿದ್ದು ಪ್ರಕರಣದ ಎರಡನೆ ಆರೋಪಿಯಾಗಿದ್ದಾನೆ. ಇನ್ನು, ಎಚ್‌ಎಲ್ ನಿವಾಸಿ ಚಾನ್‌ಪಾಷಾ(25), ನ್ಯೂ ತಿಪ್ಪಸಂದ್ರ ನಿವಾಸಿ ಬಿ.ಜಿ.ಸತೀಶ್ ಕುಮಾರ್(44) ಹಾಗೂ ಕೊತ್ತನೂರು ನಿವಾಸಿ ಶಬೀರ್ ಅಹ್ಮದ್(32) ಬಂಧಿತರು ಎಂದು ಸಿಸಿಬಿ ತಿಳಿಸಿದೆ.
ಅ.30ರಂದು ಎಚ್‌ಎಎಲ್ ಪೊಲೀಸ್ ಠಾಣಾ ಸರಹದ್ದಿನ ಜಗದೀಶ್ ನಗರ, ಬೆಮಲ್ ಆಡಿಟೋರಿಯಂ, ಬೆಮಲ್‌ಟೌನ್ ಶಿಫ್ ಕ್ವಾಟ್ರರ್ಸ್ ಹತ್ತಿರ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ತಮ್ಮ ವಶದಲ್ಲಿ ಪಿಸ್ತೂಲ್ ಮತ್ತು ಗುಂಡುಗಳನ್ನು ಇಟ್ಟುಕೊಂಡು ಮಾರಾಟ ಮಾಡುವ ಸಲುವಾಗಿ ಗಿರಾಕಿಗಳಿಗೆ ಕಾಯುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬಂಧಿತರಿಂದ ಎರಡು ಪಿಸ್ತೂಲ್ ಮತ್ತು 11 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.







