ದುಬೈ ಹೋಲಿ ಕುರ್‌ಆನ್ ಅವಾರ್ಡ್ ಸ್ಪರ್ಧೆ: ಕೆನಡಾದಿಂದ ಉಡುಪಿ ಮೂಲದ ಮರ್ವ ಆಯಿಷಾ ಮುಗ್ದಿ ಆಯ್ಕೆ

ಉಡುಪಿ, ನ.4: ದುಬೈಯ ಅಲ್ ಮಮ್ಝಾರ್ ಸೈಂಟಿಫಿಕ್ ಆ್ಯಂಡ್ ಕಲ್ಚರಲ್ ಅಸೋಶಿಯೇಶನ್‌ನಲ್ಲಿ ನ.4ರಿಂದ 16ರವರೆಗೆ ನಡೆಯುವ ಶೈಕ್ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ ಅಂತಾರಾಷ್ಟ್ರೀಯ ದುಬೈ ಹೋಲಿ ಕುರ್ ಆನ್ ಅವಾರ್ಡ್ ಸ್ಪರ್ಧೆಗೆ ಕೆನಡಾ ದೇಶದ ರಾಷ್ಟ್ರೀಯತೆ ಹೊಂದಿರುವ ಉಡುಪಿ ಜಿಲ್ಲೆ ಮೂಲದ ಹಾಫಿಝಾ ಮರ್ವ ಆಯಿಷಾ ಮುಗ್ದಿ ಆಯ್ಕೆಯಾಗಿದ್ದಾರೆ.
ಕೆನಡಾ ದಿಂದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಮರ್ವ ಆಯಿಷಾ, ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಬ್ದುಲ್ ಖರೀಂ ಖಾನ್ ಸಾಹೇಬ್‌ರ ಮೊಮ್ಮಗಳು ಹಾಗೂ ಬೈಂದೂರು ತಾಲೂಕಿನ ಶೀರೂರು ಹನೀಫ್ ಹಾಗೂ ರೆಹನಾ ಮುಗ್ದಿ ದಂಪತಿ ಪುತ್ರಿಯಾಗಿದ್ದಾರೆ.
ಸ್ಪರ್ಧೆಗೆ ಪೂರ್ವಭಾವಿಯಾಗಿ ಆರು ತಿಂಗಳ ಕಾಲ ನಡೆದ ವಿವಿಧ ಪ್ರಕ್ರಿಯೆ ಗಳ ಬಳಿಕ ವಿಶ್ವದ 63 ಸ್ಪರ್ಧಾಳುಗಳ ಜೊತೆಗೆ ಕೆನಡಾದಿಂದ ಮರ್ವ ಆಯಿಷಾ ಅವರನ್ನು ಯುಎಇ ಸರಕಾರ ಆಯ್ಕೆ ಮಾಡಿದೆ.
ಈ ಸ್ಪರ್ಧೆಯಲ್ಲಿ 25 ವರ್ಷದೊಳಗಿನ ಮಹಿಳೆಯರಿಗೆ ಅವಕಾಶವಿದ್ದು, ಪ್ರಥಮ ಬಹುಮಾನವಾಗಿ ಎರಡೂವರೆ ಲಕ್ಷ ದಿರ್ಹಮ್ (ಸುಮಾರು 50 ಲಕ್ಷ ರೂ.) ಮತ್ತು ಹೋಲಿ ಕುರ್ ಆನ್ ಪ್ರಶಸ್ತಿಯನ್ನು ಯುಎಇ ಸರಕಾರ ನೀಡಲಿದೆ. ಈ ವರ್ಷ 3ನೇ ಎಡಿಶನ್ ಆಗಿದ್ದು, 70 ರಾಷ್ಟ್ರಗಳ ಸ್ಪರ್ಧಾಳುಗಳು ಈಗಾಗಲೇ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.







