ಯಾವ ಶಕ್ತಿಯೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ: ಉ.ಪ್ರದೇಶ ಡಿಸಿಎಂ

ಲಖಿಂಪುರ ಖೇರಿ(ಉ.ಪ್ರ),ನ.4: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರು ರವಿವಾರ ಇಲ್ಲಿ ಹೇಳಿದರು.
ಬಿಜೆಪಿಯು ಸದಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿತ್ತು ಮತ್ತು ಪರವಾಗಿರಲಿದೆ ಎಂದ ಅವರು,ಈ ವಿಷಯವು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿರುವುದರಿಂದ ನಾನು ಹೇಳಿಕೆ ನೀಡುವಂತಿಲ್ಲ ಎಂದರು. ಸೂಕ್ತ ಕಾಲ ಬಂದಾಗ ಭವ್ಯ ರಾಮ ಮಂದಿರ ನಿರ್ಮಾಣಗೊಳ್ಳುತ್ತದೆ ಎಂದಷ್ಟೇ ನಾವು ಹೇಳಬಲ್ಲೆವು ಎಂದೂ ಸೇರಿಸಿದರು.
ಕೇಂದ್ರ ಸರಕಾರದಿಂದ ಅಧ್ಯಾದೇಶದ ಮೂಲಕ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಲು ದಿಲ್ಲಿಯಲ್ಲಿ ಸಂತರ ಸಮಾವೇಶ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಮೌರ್ಯ,ಮಂದಿರಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಸಂತರ ಭಾವನೆಗಳನ್ನು ತಾನು ಗೌರವಿಸುವುದಾಗಿ ತಿಳಿಸಿದರು.
ಮಂದಿರ ನಿರ್ಮಾಣ ವಿಷಯದಲ್ಲಿ ತನ್ನ ಪಕ್ಷದ ನಿಲುವನ್ನು ಪುನರುಚ್ಚರಿಸಿದ ಅವರು,ರಾಮಲಲ್ಲಾನ ಜನ್ಮಭೂಮಿಯಲ್ಲಿ ಬಾಬರ್‌ನ ಹೆಸರಿನಲ್ಲಿ ಒಂದು ಇಟ್ಟಿಗೆಯನ್ನೂ ಇಡಲು ಅವಕಾಶ ನೀಡುವುದಿಲ್ಲ ಎನ್ನುವುದು ಜನತೆಗೆ ನಮ್ಮ ಅಂತಿಮ ಭರವಸೆಯಾಗಿದೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಹೆಸರಿಸದೆ ವ್ಯಂಗ್ಯವಾಡಿದ ಮೌರ್ಯ,ಜನಿವಾರವನ್ನು ಧರಿಸಿ ಹಿಂದು ಸಮುದಾಯವನ್ನು ವಂಚಿಸಲು ಪ್ರಯತ್ನಿಸುತ್ತಿರುವವರ ಅಸಲಿತನ ಮತ್ತು ಕಪಟವನ್ನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರು. ಅಯೋಧ್ಯೆ ಪ್ರಕರಣದ ವಿಚಾರಣೆ 2019ರಲ್ಲಿ ನಡೆಯಬೇಕೆಂಬ ತನ್ನ ಹೇಳಿಕೆಯ ಬಗ್ಗೆ ಕಾಂಗ್ರೆಸ್ ವಿವರಣೆ ನೀಡಬೇಕಾಗಿದೆ ಎಂದೂ ಅವರು ಹೇಳಿದರು.







