ಬೆಂಗಳೂರು: ಬ್ರೈನ್ ಡೆಡ್ ಆಗಿದ್ದ ವ್ಯಕ್ತಿಯ ಕಣ್ಣು, ಕಿಡ್ನಿ, ಹೃದಯ ದಾನ
ಪತಿಯ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ

ಶರತ್ ಬಾಬು- ಚಂದನಾ ದಂಪತಿ
ಬೆಂಗಳೂರು, ನ. 4: ನಾಲ್ಕೈದು ದಿನಗಳ ಹಿಂದೆಯಷ್ಟೇ ಪತಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ ದಂಪತಿ ಒಟ್ಟಿಗೆ ಪರಸ್ಪರ ಕೇಕ್ ತಿನ್ನಿಸಿಕೊಂಡಿದ್ದರು. ಆದರೆ, ಅಪಘಾತದ ರೂಪದಲ್ಲಿ ಬಂದ ವಿಧಿ ಪತಿಯ ಪ್ರಾಣವನ್ನೇ ಕಸಿದುಕೊಂಡಿತ್ತಾದರೂ, ಭರಸಿಡಿಲಾಗಿ ಬಂದ ಸಾವಿನ ನೋವಿನಲ್ಲಿಯೂ ಎಂಟು ತಿಂಗಳ ಗರ್ಭಿಣಿ, ಪತಿಯ ಕಣ್ಣು, ಕಿಡ್ನಿ, ಹೃದಯ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಬಳ್ಳಾರಿ ಮೂಲದ ಶರತ್ ಬಾಬು(30) ಎಂಬವರು ಅ.31ರಂದು ಇಲ್ಲಿನ ಬಳ್ಳಾರಿ ರಸ್ತೆಯಲ್ಲಿನ ಯಲಹಂಕ ಸಮೀಪದಲ್ಲಿ ಬಿಎಸ್ಎಫ್ ಕ್ಯಾಂಪ್ ಬಳಿ ಬೈಕ್ನಲ್ಲಿ ತೆರಳುತ್ತಿದ್ದಾಗ ಕಾರಿಗೆ ಢಿಕ್ಕಿ ಹೊಡೆದುಕೊಂಡ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ತಲೆಗೆ ಪೆಟ್ಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅವರಿಗೆ ಪ್ರಜ್ಞೆ ಮರಳಿರಲಿಲ್ಲ. ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ಹೇಳಿದ್ದರು. ಆದರೆ, ಎಂಟು ತಿಂಗಳ ಗರ್ಭಿಣಿಯಾಗಿರುವ ಶರತ್ ಬಾಬು ಪತ್ನಿ ಚಂದನಾ, ಪತಿಯ ಸಾವಿನ ನೋವಿನಲ್ಲೂ ಕಣ್ಣುಗಳು, ಕಿಡ್ನಿ ಮತ್ತು ಹೃದಯವನ್ನು ದಾನ ಮಾಡುವ ಮೂಲಕ ನಾಲ್ಕೈದು ಮಂದಿಗೆ ಮರು ಜೀವ ನೀಡಿದ್ದಾರೆ.
ಸಿನೆಮಾ ಮತ್ತು ಸಾಕ್ಷಚಿತ್ರಗಳ ಕ್ಯಾಮರಾಮೆನ್ ಹಾಗೂ ಕ್ಯಾಮರಾ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಶರತ್ ಬಾಬು ಹತ್ತು ವರ್ಷಗಳ ಹಿಂದೆ ಉದ್ಯೋಗವನ್ನರಿಸಿ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೆ ನೆಲೆಸಿದ್ದರು. ಸಾವಿನ ನೋವಿನಲ್ಲಿಯೂ ಅಂಗಾಗ ದಾನ ಮಾಡುವ ಮೂಲಕ ಶರತ್ ಬಾಬು ಪತ್ನಿ ಹಾಗೂ ಆತನ ಪೋಷಕರು ಮಾದರಿಯಾಗಿದ್ದಾರೆಂದು ಶರತ್ ಬಾಬು ಸ್ನೇಹಿತ ರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







