ಪ್ರಾರಂಪರಿಕವಾಗಿ ಕಲೆಗಳನ್ನು ಉಳಿಸಿ-ಬೆಳೆಸಬೇಕು: ಸಚಿವ ಕೃಷಭೈರೇಗೌಡ

ಬೆಂಗಳೂರು, ನ.4: ಪ್ರಾರಂಪರಿಕವಾಗಿ ಬಂದಿರುವ ಕಲೆ, ನೃತ್ಯ ಹಾಗೂ ನಾಟಕವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ರವಿವಾರ ಮಲ್ಲೇಶ್ವರಂನ ಸೇವಾ ಸದನದ ಸಭಾಂಗಣದಲ್ಲಿ ಎಲಿಮೆಂಟ್ಸ್ ಆಫ್ ಆರ್ಟ್ ಅಂಡ್ ಹೆರಿಟೇಜ್ ಅಕಾಡಮಿ ಆಯೋಜಿಸಿದ್ದ ಬ್ರಿಹಾದ್ ತ್ರಿಕಂ-2018 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳು ಇಂಟರ್‌ನೆಟ್‌ನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರಿಂದ, ಕಲೆ, ನೃತ್ಯ, ನಾಟಕಗಳ ಕಡೆಗಿನ ಗಮನ ಕಡಿಮೆಯಾಗುತ್ತಿದೆ. ಇದನ್ನು ತಡೆಗಟ್ಟಲು ಬ್ರಿಹಾದ್ ತ್ರಿಕಂ ನಂತಹ ಕಾರ್ಯಕ್ರಮಗಳು ಬಹುಮುಖ್ಯ ಎಂದು ಹೇಳಿದರು.
ಮಕ್ಕಳು, ಯುವಕರು ಕಲೆ, ನೃತ್ಯಗಳ ಬಗ್ಗೆ ಆಸಕ್ತಿ ಹೊಂದಬೇಕು. ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಎಲ್ಲ ಕಲೆಗಳು ಪ್ರದರ್ಶನಗೊಂಡು ಬೆಳೆಯಬೇಕೆಂದ ಅವರು ಇತ್ತೀಚಿನ ದಿನಗಳಲ್ಲಿ ನಶಿಸುತ್ತಿರುವ ಕಲೆಗಳ ಉಳಿವಿಗೆ ಎಲ್ಲರೂ ಪ್ರಯತ್ನಿಸುವ ಅವಶ್ಯಕತೆ ಇದೆ. ಅಲ್ಲದೆ, ಮನೆಯಲ್ಲಿ ಮಕ್ಕಳಿಗೆ ನೃತ್ಯವನ್ನು ಕಲಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ ಉಪಸ್ಥಿತರಿದ್ದರು.







