ಸಿನೆಮಾ ಸಂಬಂಧಿಸಿದ ಪುಸ್ತಕಗಳು ಶೀಘ್ರ ಬಿಡುಗಡೆ: ನಾಗತಿಹಳ್ಳಿ ಚಂದ್ರಶೇಖರ್
‘ಚಿತ್ರಕತೆ-ಹಾಗೆಂದರೇನು?’ ಕೃತಿ ಬಿಡುಗಡೆ ಸಮಾರಂಭ

ಬೆಂಗಳೂರು, ನ.4: ಸಿನೆಮಾಗೆ ಸಂಬಂಧಿಸಿದ ಛಾಯಾಗ್ರಹಣ, ಸಂಕಲನ, ಹಿರಿಯ ನಟ, ನಟಿಯರ ಅನುಭವ ಸೇರಿದಂತೆ ವಿವಿಧ ಪ್ರಕಾರದ ಪುಸ್ತಕಗಳು ಸಿದ್ಧಗೊಳ್ಳುತ್ತಿದ್ದು, ಶೀಘ್ರವೆ ಬಿಡುಗಡೆಗೊಳ್ಳಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದರು.
ರವಿವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಹಿರಿಯ ನಿರ್ದೇಶಕ ಎನ್.ಎಸ್.ಶಂಕರ್‌ರವರ ‘ಚಿತ್ರಕತೆ- ಹಾಗೆಂದರೇನು?’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ತೀರ ಕಡಿಮೆಯಿದೆ. ಇದರಿಂದ ಸಿನೆಮಾದ ವಿವಿಧ ಪ್ರಕಾರಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸಿನೆಮಾ ಕ್ಷೇತ್ರವನ್ನು ಪುಸ್ತಕಗಳಿಂದ ಅರಿವನ್ನು ಹೆಚ್ಚಿಸಿಕೊಳ್ಳುವ ಮೂಲಕ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಚಲಚಿತ್ರ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಹೇಳಿದರು.
ಸಿನೆಮಾ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ಕತೆ ಇರುತ್ತದೆ. ಈ ಕತೆಗಳಲ್ಲಿಯೆ ಒಂದನ್ನು ಸಿನೆಮಾಗೆ ಆಯ್ಕೆ ಮಾಡಿಕೊಂಡು ಕೇಳುಗರಿಗೆ ಹಾಗೂ ನೋಡುಗರ ಮನಕ್ಕೆ ತಾಟುವಂತಹ ರೀತಿಯಲ್ಲಿ ಕಟ್ಟಿಕೊಡುವುದೆ ಸಿನೆಮಾ ಆಗಿದೆ. ಹೀಗಾಗಿ ಕತೆಗಳನ್ನು ಕೇಳುವುದು ಹಾಗೂ ನೋಡುವವರು ಇರುವವರೆಗೆ ಸಿನೆಮಾಗೆ ಸಾವಿಲ್ಲವೆಂದು ತಿಳಿಸಿದರು.
ಹಿರಿಯ ನಟ ರಮೇಶ್ ಅರವಿಂದ ಮಾತನಾಡಿ, ಉತ್ತಮ ಸಿನೆಮಾ ರೂಪಗೊಳ್ಳಬೇಕಾದರೆ ನಿರ್ದೇಶಕನ ಪಾತ್ರ ಬಹಳ ಮುಖ್ಯವಾಗಿರುತ್ತದೆ. ನಿರ್ದೇಶಕನೊಬ್ಬ ತಾನು ರೂಪಿಸಲು ಬಯಸುವ ಸಿನೆಮಾ ಅಂತಿಮವಾಗಿ ಹೇಗೆ ಕಾಣಬೇಕೆಂಬ ಕಲ್ಪನೆಯನ್ನು ನಟ, ನಟಿಯರು, ಛಾಯಾಚಿತ್ರಗಾರ, ಸಂಕಲನಕಾರನಿಗೆ ಮೂಡಿಸಲು ಯಶಸ್ವಿಯಾಗಬೇಕು. ಆ ಜಾಣ್ಮೆ, ಪ್ರೌಢಿಮೆಯನ್ನು ಗಳಿಸಿಕೊಂಡ ನಿರ್ದೇಶಕ ಮಾತ್ರ ಉತ್ತಮ ಸಿನೆಮಾ ರೂಪಿಸಲು ಸಾಧ್ಯವೆಂದು ತಿಳಿಸಿದರು.
ಹಿರಿಯ ನಿರ್ದೇಶಕ ಎನ್.ಎಸ್.ಶಂಕರ್ ಬರೆದಿರುವ ಚಿತ್ರಕತೆ-ಹಾಗೆಂದರೇನು ಕೃತಿ ಕನ್ನಡ ಸಿನೆಮಾ ಜಗತ್ತಿಗೆ ಅಗತ್ಯವಾಗಿ ಬೇಕಾದದ್ದು. ಕನ್ನಡದ ಅತ್ಯುತ್ತಮ ಸಿನೆಮಾಗಳನ್ನು ಆಯ್ಕೆ ಮಾಡಿಕೊಂಡು, ಚಿತ್ರಕತೆ, ಸಂಭಾಷಣೆ ಬರೆಯುವುದು ಹೇಗೆ ಎಂಬುದನ್ನು ಅತ್ಯಂತ ಸರಳ ಭಾಷೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಸಿನೆಮಾದಲ್ಲಿ ಕೆಲಸ ಮಾಡುತ್ತಿರುವ, ಕೆಲಸ ಮಾಡಲು ಬಯಸುವ ಪ್ರತಿಯೊಬ್ಬರು ಓದಬೇಕಾದ ಕೃತಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಿರ್ದೇಶಕ ಎನ್.ಎಸ್.ಶಂಕರ್ ಮಾತನಾಡಿ, ಬರವಣಿಗೆಯನ್ನು ಕರಗತ ಮಾಡಿಕೊಂಡಿರುವ ಪ್ರತಿಯೊಬ್ಬರು ಚಿತ್ರಕತೆ ಬರೆಯಲು ಸಾಮರ್ಥ್ಯ ಹೊಂದಿರುತ್ತಾರೆ. ಆದರೆ, ಸಿನೆಮಾ ಚಿತ್ರಕತೆಯ ವ್ಯಾಕರಣ ಗೊತ್ತಿರಬೇಕಷ್ಟೆ. ಈ ನಿಟ್ಟಿನಲ್ಲಿ ‘ಚಿತ್ರಕತೆ-ಹಾಗೆಂದರೇನು’ ಒಂದು ಉತ್ತಮ ಪ್ರಯತ್ನದ ಕೃತಿಯಾಗಿದೆ ಎಂದು ತಿಳಿಸಿದರು. ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ದಿನೇಶ್ ಉಪಸ್ಥಿತರಿದ್ದರು.







