ಮಾಧ್ಯಮಗಳು ಪುರುಷರ ಹತೋಟಿಯಲ್ಲಿವೆ: ಲೇಖಾ ನಾಯ್ಡು
ಬೆಂಗಳೂರು, ನ. 4: ಮಾಧ್ಯಮಗಳು ಹೆಚ್ಚಾಗಿ ಪುರುಷರ ಹತೋಟಿಯಲ್ಲಿರುವುದರಿಂದ ಪಿತೃಪ್ರದಾನ ಪರಿಕಲ್ಪನೆ ಇನ್ನೂ ಜೀವಂತವಾಗಿದೆ ಎಂದು ‘ಅವಳ ಹೆಜ್ಜೆ’ ಸಂಸ್ಥೆಯ ನಿರ್ದೇಶಕಿ ಲೇಖಾ ನಾಯ್ಡು ಅಭಿಪ್ರಾಯಪಟ್ಟರು.
ರವಿವಾರ ನಗರದಲ್ಲಿ ರಾಜ್ಯೋತ್ಸವದ ಅಂಗವಾಗಿ, ಕನ್ನಡತಿಯರ ಪಾತ್ರವನ್ನು ಸ್ಮರಿಸಲು ಅವಳ ಹೆಜ್ಜೆ ಸಂಸ್ಥೆ ಆಯೋಜಿಸಿದ್ದ, ಕನ್ನಡತಿ ಉತ್ಸವದಲ್ಲಿ ಮಹಿಳೆಯರೇ ತಯಾರಿಸಿದ ಹಲವು ಕಿರುಚಿತ್ರಗಳ ಪ್ರದರ್ಶನದ ಜೊತೆಗೆ ಸ್ತ್ರೀ ನೋಟದ ಪ್ರಸ್ತುತಿ, ಪ್ರಾಮುಖ್ಯತೆ ಮತ್ತು ಸವಾಲುಗಳ ಕುರಿತು ಅವರು ಮಾತನಾಡಿದರು.
ಪುರುಷ ವೀಕ್ಷಕರ ಅಭಿರುಚಿ, ದೃಷ್ಠಿಕೋನಕ್ಕೆ ಪೂರಕವಾಗಿ ಮಾತ್ರವೇ ಚಲನಚಿತ್ರ ಮಾಧ್ಯಮ ರೂಪಿತಗೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ, ಸ್ತ್ರೀ ವೀಕ್ಷಕರ ನೋಟ ಮತ್ತು ಮಹಿಳೆಯರ ನಿರ್ಮಾಣ, ನಿರ್ದೇಶನದಲ್ಲಿ ಭಿನ್ನವಾದ ಚಿತ್ರಣ ಹೆಚ್ಚು ಹೊರಬರಲು ಸಾಧ್ಯವಿದೆ. ಹಾಗೂ ಮಹಿಳೆಯರು ಮಾಧ್ಯಮಗಳಲ್ಲಿ ತೊಡಗಿಸಿಕೊಂಡಷ್ಟೂ, ಸ್ತ್ರೀಯರ ದೃಷ್ಠಿಕೋನ ನಮ್ಮ ಸಮಾಜ, ಸಂಸ್ಕೃತಿಯ ಭಾಗವಾಗುತ್ತದೆ. ಸಮಾಜದ ಉನ್ನತಿಗೆ ಪೂರಕವಾಗುತ್ತದೆ ಎಂದರು.
ಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್ ಮಾತನಾಡಿ, ‘ದೇವೀರಿ’ ಚಿತ್ರದಿಂದ ಆರಂಭಿಸಿ, ತಾವು ವ್ಯಕ್ತಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಬೆಳೆದಿರುವುದರಲ್ಲಿ ತಮ್ಮ ಮೇಲೆ ಪ್ರಭಾವ ಬೀರಿದ್ದವರು. ಖ್ಯಾತನಾಮ ತಂದೆಗಿಂತಲೂ ಹೆಚ್ಚಾಗಿ ತಾಯಿ ಎನ್ನುತ್ತಾ ಆಕೆ ತಾವೇ ಸ್ವತಂತ್ರವಾಗಿ ಸೀರೆಯ ಅಂಗಡಿಯನ್ನು ತೆರೆದು ದುಡಿದು ಕಷ್ಟದಲ್ಲೂ ಕುಟುಂಬವನ್ನು ನಡೆಸಿದ್ದಲ್ಲದೇ, ತಮ್ಮ ಮಕ್ಕಳು ಸ್ವಾವಲಂಬಿಯಾಗಿ, ಧೈರ್ಯವಂತರಾಗಿ ಬೆಳೆಯಬೇಕೆಂದು ಸದಾ ಪ್ರೇರೇಪಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ, ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ, ಹೆಣ್ಣು ಮಕ್ಕಳ ಪಾತ್ರ, ಕೊಡುಗೆಗಳ ಹೆಜ್ಜೆ ಗುರುತು ಇರಬೇಕೆಂಬುದು ಅವಳ ಹೆಜ್ಜೆಯ ಆಶಯ ಮತ್ತು ಧ್ಯೇಯ ಎಂದು ತಿಳಿಸಿದರು.







