ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ವಂಚನೆ ಸಲ್ಲ: ಮಾಜಿ ಶಾಸಕ ವೈ.ಎಸ್.ವಿ.ದತ್ತ

ಬೆಂಗಳೂರು, ನ.4: ಎಪಿಎಂಸಿ, ಡಿಸಿಸಿ ಹಾಗೂ ಪಿಎಲ್‌ಡಿ ಬ್ಯಾಂಕುಗಳ ಚುನಾವಣೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆವರೆಗೂ ಮಹಿಳೆಯರಿಗೆ ಮೀಸಲಾತಿ ನೀಡಿ, ಶಾಸನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡದೇ ವಂಚಿಸಲಾಗುತ್ತಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಎಸ್‌ಸಿಎಂ ಹೌಸ್‌ನಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಆಯೋಜಿಸಿದ್ದ ‘ಚುನಾವಣೆ ಒಳ ಹೊರಗೆ’ ವಿಷಯ ಕುರಿತ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಶಾಸನಸಭೆ ಚುನಾವಣೆಯಲ್ಲಿ ಮೀಸಲಾತಿಯಿಂದ ದೂರವಿಡಲಾಗಿದೆ ಎಂದರು.
ಮಹಿಳೆಯರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕು ಸಿಗುತ್ತಿಲ್ಲ ಎಂದ ಅವರು, ಪುರುಷ ಹಾಗೂ ಮಹಿಳೆಯರಿಗೆ ಸಮಾನವಾದ ಅವಕಾಶ ಸಿಗಬೇಕಾದರೆ ನಮ್ಮ ಇಂದಿನ ಚುನಾವಣಾ ವ್ಯವಸ್ಥೆ ಬದಲಾಗಬೇಕು. ಆದರೆ, ಇಂದಿನ ಚುನಾವಣಾ ವ್ಯವಸ್ಥೆ ಕೆಟ್ಟು ಹೋಗಿದೆ. ಹೀಗಾಗಿ, ಜನ ಬದಲಾವಣೆಯಾಗದಿದ್ದರೆ ನಮ್ಮ ವ್ಯವಸ್ಥೆಯೂ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದರು.
ಭಾರತದಲ್ಲಿ 1949ರಲ್ಲಿ ಸ್ವಾತಂತ್ರ, 1950ರಲ್ಲಿ ಸಂವಿಧಾನವನ್ನು ಅಂಗೀಕಾರ ಮಾಡಿ, ಎಲ್ಲರಿಗೂ ಮತ ಹಾಕುವ ಹಕ್ಕನ್ನು ನೀಡಿದೆ. ಆದರೆ, ದೇಶದಲ್ಲಿ ಸಂವಿಧಾನಕ್ಕೂ ಮೊದಲು ಬಸವಣ್ಣ ಜನತಂತ್ರ ಪರಿಕಲ್ಪನೆಯನ್ನು, ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ನೀಡಿದ್ದರು. ನಾನೊಬ್ಬನೇ ಭಕ್ತ ಉಳಿದವರೆಲ್ಲರೂ ಜಂಗಮಧಾರಿಗಳು ಎಂದಿದ್ದ ಎಂದು ದತ್ತ ಅವರು ನುಡಿದರು.
ಇಡೀ ವಿಶ್ವದಲ್ಲಿ ಸ್ತ್ರೀಯರಿಗೆ ಮೊಟ್ಟ ಮೊದಲ ಬಾರಿಗೆ ಮತದಾನ ಹಕ್ಕು ನೀಡಿದ್ದು ನಮ್ಮ ದೇಶದಲ್ಲಿ ಮಾತ್ರ. ಅಭಿವೃದ್ಧಿಶೀಲ ರಾಷ್ಟ್ರಗಳ ಇತಿಹಾಸವನ್ನು ಪರಿಶೀಲಿಸಿದರೆ ಇದು ತಿಳಿಯುತ್ತದೆ. ಆದರೆ, ಬೇರೆ ದೇಶಗಳಿಗಿಂತ ಮೊದಲೇ ಮತದಾನ ಹಕ್ಕನ್ನಷ್ಟೇ ನೀಡಲಾಗಿದೆ. ಮಹಿಳೆಯರ ಸ್ಥಿತಿ ಇಂದಿಗೂ ಅಭಿವೃದ್ಧಿಗೊಂಡಿಲ್ಲ ಎಂದರು.
ಹಿಂದಿನ ದಿನಗಳಲ್ಲಿ ದೇಶದಲ್ಲಿ ಅನಕ್ಷರಸ್ಥರು, ಜಾಗೃತಿಯಿಲ್ಲದ ಜನರು ಮತದಾನ ಮಾಡುತ್ತಿದ್ದರು. ಆಗ ವಿಧಾನಸೌಧದಲ್ಲಿ ರೈತರ, ಕಾರ್ಮಿಕರ ಧ್ವನಿಯಾಗಿ ಒಂದಷ್ಟು ಜನಪ್ರತಿನಿಧಿಗಳಿರುತ್ತಿದ್ದರು. ಈಗ ಎಲ್ಲರಿಗೂ ಶಿಕ್ಷಣ, ಸಾಮಾಜಿಕ ನ್ಯಾಯ, ಮೀಸಲಾತಿ ಸಿಕ್ಕಿದೆ, ಆಧುನೀಕರಣಗೊಂಡಿದೆ. ಆದರೆ, ಶಾಸನಸಭೆಗಳಿಗೆ ಯಾರು ಆಯ್ಕೆಯಾಗುತ್ತಿದ್ದಾರೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.
ಚುನಾವಣಾ ವ್ಯವಸ್ಥೆ ಬಂದ ದಿನಗಳಲ್ಲಿ ತಾತ್ವಿಕ ನೆಲೆಯ ಆಧಾರದ ಮೇಲೆ ನಡೆಯುತ್ತಿದ್ದ ಅನೇಕ ಜನಪ್ರತಿನಿಧಿಗಳು, ಮಹಿಳೆಯರಿದ್ದರು. ಇಂದು ಎಷ್ಟು ಜನರಿದ್ದಾರೆ ಎಂದ ಅವರು, ಹಣಬಲ, ತೋಳುಬಲ ಇರುವವವರು ಅಧಿಕಾರಕ್ಕೆ ಬರುತ್ತಿದ್ದಾರೆ. ಶಾಂತವೇರಿ ಗೋಪಾಲಗೌಡರಂತಹ ಜನ ನಾಯಕರನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೂ ಹೆಚ್ಚು ಭ್ರಷ್ಟರಾಗುತ್ತಿದ್ದಾರೆ. ಹಣ, ಹೆಂಡಕ್ಕಾಗಿ ತಮ್ಮ ಮತಗಳನ್ನು ಮಾರಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಯಾವ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ಎಲ್ಲಿಯವರೆಗೂ ಮಹಿಳೆಯು ತಮ್ಮ ಕುಟುಂಬದಲ್ಲಿನ ಪುರುಷರನ್ನು ಹತೋಟಿಯಲ್ಲಿ ಇಡುವುದಿಲ್ಲವೊ ಅಲ್ಲಿಯವರೆಗೂ ಸಮಾಜದ ಬದಲಾವಣೆ ಆಗಲ್ಲ ಎಂದು ನುಡಿದರು.
ನಮ್ಮ ದೇಶದಲ್ಲಿ ಆತ್ಮವಂಚನೆ ಮಾಡಿಕೊಂಡರೆ ಎಷ್ಟು ದಿನ ಬೇಕಾದರೂ ಅಧಿಕಾರದಲ್ಲಿ ಇರಬಹುದು. ಆದರೆ, ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ನಡೆದುಕೊಂಡರೆ ಅಧಿಕಾರ ಸಿಗುವುದಿಲ್ಲ. ಹೀಗಾಗಿ, ಜನರು ಆಯ್ಕೆ ಮಾಡುವ ಸಂದರ್ಭದಲ್ಲಿಯೇ ಯೋಗ್ಯವಾದ, ನಿಷ್ಠ, ಪ್ರಾಮಾಣಿಕ ಜನ ನಾಯಕರನ್ನು ನೋಡಬೇಕು. ದುಡ್ಡಿಗೆ ಮತ ಮಾರಿಕೊಂಡರೆ ನಮ್ಮ ವ್ಯವಸ್ಥೆಯನ್ನು ಬದಲಿಸಲು ಕಷ್ಟ ಎಂದು ವೈ.ಎಸ್.ವಿ.ದತ್ತ ಅಭಿಪ್ರಾಯಿಸಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆ ಸಮಾನರು ಎಂಬ ಸಂವಿಧಾನ ಬದ್ಧವಾದ ಹಕ್ಕುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಹಿಳೆಯರು ಇಂದು ತಮ್ಮ ಹಕ್ಕುಗಳಿಗಾಗಿ ಬೀದಿಗೆ ಬಂದು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ದೇಶದಲ್ಲಿನ ರಾಜಕೀಯ ಪಕ್ಷಗಳು ಪುರುಷರಿಗೆ ಸಮಾನವಾಗಿ ಅರ್ಹ ಮಹಿಳೆರನ್ನು ಗುರುತಿಸಿ ರಾಜಕೀಯವಾಗಿ ಸ್ಥಾನಮಾನ ನೀಡಬೇಕಾಗಿರುವುದು ಅವರ ಕರ್ತವ್ಯ. ಆದರೆ, ಅದನ್ನು ಕೆಲವು ಬಲಿಷ್ಠ ಶಕ್ತಿಗಳು ನಿಯಂತ್ರಣ ಮಾಡುತ್ತಿವೆ. ಹೀಗಾಗಿ, ಸಂವಿಧಾನ ಬದ್ಧವಾಗಿ ಮೀಸಲಾತಿ ಅನುಷ್ಠಾನವಾದರೆ ಅಷ್ಟೇ ಮಹಿಳೆಯರಿಗೆ ಸಮಾನ ಅವಕಾಶ ಸಿಗಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ರಾಜಕಾರಣಗಳ ಅಕ್ಕ, ತಂಗಿ, ಹೆಂಡತಿ, ಸಂಬಂಧಿಕರ ನಡುವೆಯೇ ಗಿರಕಿ ಹೊಡೆಯುತ್ತದೆ ಎಂದರು. ಸಾಹಿತಿ ವಿಜಯಮ್ಮ, ರೈತ ಮುಖಂಡರಾದ ಅನುಸೂಯಮ್ಮ ಉಪಸ್ಥಿತರಿದ್ದರು.







