ಉಡುಪಿ ಜಿಲ್ಲಾಮಟ್ಟದ ಮಹಿಳಾ ತ್ರೋಬಾಲ್ ಪಂದ್ಯಾಟ: ಶಿರ್ವ ಕಾಲೇಜು ತಂಡಕ್ಕೆ ಪ್ರಶಸ್ತಿ

ಉಡುಪಿ, ನ.4: ರಾಂಪುರ ಅಲೆವೂರು ಮಹಿಳಾ ಸಂಘದ ಆಶ್ರಯದಲ್ಲಿ ಅಲೆವೂರು ಯುವಕ ಸಂಘದ ಸಹಯೋಗದಲ್ಲಿ ಅಲೆವೂರು ಸುಬೋಧಿನಿ ಶಾಲಾ ಮೈದಾನದಲ್ಲಿ ರವಿವಾರ ಏರ್ಪಡಿಸಲಾದ ಉಡುಪಿ ಜಿಲ್ಲಾಮಟ್ಟದ ಮಹಿಳಾ ತ್ರೋಬಾಲ್ ಪಂದ್ಯಾಟ ‘ಸ್ಫೂರ್ತಿ ಟ್ರೋಫಿ’ಯನ್ನು ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ತಂಡ ಗೆದ್ದುಗೊಂಡಿದೆ.
ಪಂದ್ಯಾಟದ ದ್ವಿತೀಯ ಪ್ರಶಸ್ತಿಯನ್ನು ಶಿರ್ವ ಹಿಂದೂ ಪ್ರೌಢಶಾಲಾ ತಂಡ ಪಡೆದುಕೊಂಡಿದೆ. ಉತ್ತಮ ಎಸೆತಗಾರ್ತಿ ವೈಯಕ್ತಿಕ ಪ್ರಶಸ್ತಿಯನ್ನು ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಜಯಶ್ರೀ, ಉತ್ತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ಅದೇ ತಂಡದ ಸೃಷ್ಠಿ ಹಾಗೂ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿ ಯನ್ನು ಅದೇ ತಂಡದ ಶಮಿತಾ ಅವರು ತನ್ನದಾಗಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ಜಿಲ್ಲೆಯಲ್ಲಿ ಕ್ರೀಡಾ ಸೌಲಭ್ಯಗಳೊಂದಿಗೆ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡ ಲಾಗುತ್ತಿದೆ. ಆದರೆ ಜಿಲ್ಲೆ ಕ್ರೀಡಾ ವಸತಿ ಶಾಲೆಗೆ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಿದರೂ ಜಿಲ್ಲೆಯ ಕ್ರೀಡಾಪಟುಗಳು ಆಸಕ್ತಿ ತೋರುತ್ತಿಲ್ಲ. ಯುವಕ- ಯುವತಿ ಮಂಡಳಗಳು ಕ್ರೀಡೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಜಾನಪದ ಕಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ಮಾತನಾಡಿ, ಇಂದು ಕ್ರೀಡಾ ಕ್ಷೇತ್ರ ಎಂಬುದು ಉಳ್ಳವರ ಸೊತ್ತು ಆಗುತ್ತಿದೆ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಕ್ರೀಡಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರಕಾರ ಗ್ರಾಮೀಣ ಕ್ರೀಡಾಪಟುಗಳನ್ನು ನಿರ್ಲಕ್ಷಿಸು ತ್ತಿವೆ ಎಂದು ಆರೋಪಿಸಿದರು.
ಉಡುಪಿ ನಗರಸಭೆ ಸದಸ್ಯೆ ರಜನಿ ಹೆಬ್ಬಾರ್ ಒಳಕಾಡು, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ತಾಲೂಕು ಇಂಡಸ್ಟ್ರೀಯಲ್ ಕೋ ಆಪರೇಟಿವ್ ಸೊಸೈಟಿಯ ಮೂಡುಬೆಳ್ಳೆ ಶಾಖಾಧಿಕಾರಿ ಲಕ್ಷ್ಮೀವಲ್ಲಭ ಉಪಾ ಧ್ಯಾಯ, ಅಲೆವೂರು ಸುಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ವಾರಿಜಾ ಎಸ್. ಶೆಟ್ಟಿ, ರಾಘವೇಂದ್ರ ಭಟ್, ಯಾದವ್ ಶೆಟ್ಟಿಗಾರ್, ಆನಂದ ಶೇರಿಗಾರ್ ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಗೌರವಾಧ್ಯಕ್ಷೆ ಮಮತಾ ಅಶೋಕ್ ಶೆಟ್ಟಿಗಾರ್, ಅಧ್ಯಕ್ಷೆ ರಮಾ ಜೆ. ರಾವ್, ಕ್ರೀಡಾ ಕಾರ್ಯದರ್ಶಿ ವೀಣಾ ಜಯರಾಮ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸುಬ್ಬರಾಯ ನಾಯಕ್ ವಿಜೇತರ ಪಟ್ಟಿ ವಾಚಿಸಿದರು. ಅನುರಕ್ಷಾ ಸ್ವಾಗತಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.







