ಇರಾನ್ ಜೊತೆ ನೂತನ, ಸಮಗ್ರ ಒಪ್ಪಂದಕ್ಕೆ ಅಮೆರಿಕ ಮುಕ್ತ: ಟ್ರಂಪ್

ವಾಶಿಂಗ್ಟನ್, ನ. 4: ಇರಾನ್‌ನೊಂದಿಗೆ ನೂತನ ಹಾಗೂ ಹೆಚ್ಚು ಸಮಗ್ರ ಒಪ್ಪಂದವೊಂದನ್ನು ಏರ್ಪಡಿಸಲು ಅಮೆರಿಕ ಮುಕ್ತ ಮನೋಭಾವ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ವಿಧಿಸಿರುವ ಎರಡನೇ ಹಾಗೂ ಅಂತಿಮ ಸುತ್ತಿನ ದಿಗ್ಬಂಧನಗಳು ಸೋಮವಾರ ಜಾರಿಗೆ ಬರುವುದಕ್ಕೆ ಪೂರ್ವಭಾವಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.
ಅಮೆರಿಕದ ದಿಗ್ಬಂಧನವು ಇರಾನ್‌ನ ಕಚ್ಚಾ ತೈಲ ರಫ್ತು, ನೌಕಾಯಾನ ಮತ್ತು ಬಂದರು ಹಾಗೂ ಅದರ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ.
ಇರಾನ್ ಜೊತೆ ಅಮೆರಿಕ ಪ್ರಸ್ತಾಪಿಸುತ್ತಿರುವ ನೂತನ ಒಪ್ಪಂದವು ಆ ದೇಶ ಪರಮಾಣು ಅಸ್ತ್ರಗಳ ಹಾದಿಯಲ್ಲಿ ಸಾಗುವುದನ್ನು ಸಂಪೂರ್ಣವಾಗಿ ತಡೆಯುತ್ತದೆ, ತನ್ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಗಳನ್ನು ತೊರೆಯುವಂತೆ ಆ ದೇಶಕ್ಕೆ ತಾಕೀತು ಮಾಡುತ್ತದೆ ಹಾಗೂ ‘ಬುಡಮೇಲು ಚಟುವಟಿಕೆ’ಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಇರಾನ್ ಈ ವಲಯದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಾಗಿ ಅಮೆರಿಕ ಆರೋಪಿಸುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.







