ನ.28ರಿಂದ 30ರವರೆಗೆ ದಿಲ್ಲಿಯಲ್ಲಿ ‘ಕಿಸಾನ್ ಮಾರ್ಚ್’

ಹೊಸದಿಲ್ಲಿ,ನ.4: ದೇಶದಲ್ಲಿಯ ರೈತರ ಸಂಕಷ್ಟಗಳಿಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳನ್ನು ತರಾಟೆಗೆತ್ತಿಕೊಂಡಿರುವ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ದ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮುಲ್ಲಾ ಅವರು,ರೈತರ ಬಾಕಿಯುಳಿದಿರುವ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ದಿಲ್ಲಿಯಲ್ಲಿ ನ.28ರಿಂದ 30ರವರೆಗೆ ರೈತರ ಜಾಥಾವನ್ನು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ರೈತರ ಸಮಸ್ಯೆಗಳು ಎಡಪಕ್ಷಗಳ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಮುಂದುವರಿದಿವೆ ಎಂದು ಒತ್ತಿ ಹೇಳಿದರು. ಭೂ ಸುಧಾರಣೆಗಳನ್ನು ತರುವಲ್ಲಿ ದೇಶವನ್ನು ಆಳಿದ ಸರಕಾರಗಳ ವೈಫಲ್ಯವು ಕೃಷಿ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸ್ವಾತಂತ್ರಾನಂತರ ಸರಕಾರವು ಕೃಷಿಕ್ಷೇತ್ರದಲ್ಲಿ ಭೂಸುಧಾರಣೆೆಗಳಿಗೆ ಪ್ರಮುಖ ಆದ್ಯತೆಯನ್ನು ನೀಡಿರಲಿಲ್ಲ ಎಂದ ಅವರು,ಆಗಿನ ಆಡಳಿತ ಪಕ್ಷವು ಪ್ರಮಖ ರಾಜ್ಯಗಳಲ್ಲಿಯ ಜಮೀನುದಾರರೊಂದಿಗೆ ನಿಕಟವಾಗಿತ್ತು ಎಂದು ಆರೋಪಿಸಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧವೂ ದಾಳಿ ನಡೆಸಿದ ಅವರು, ಅದು 2014ರಲ್ಲಿ ರೈತರಿಗೆ ನೀಡಿದ್ದ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಮತ್ತು ಕಬ್ಬಿಗೆ ಲಾಭದಾಯಕ ಬೆಲೆಯನ್ನು ಒದಗಿಸುವ ಅದರ ಪ್ರಕಟಣೆ ಹುಸಿಯಾಗಿದೆ ಎಂದು ಬಣ್ಣಿಸಿದರು.
ಕೃಷಿವೆಚ್ಚಗಳು ಹಲವಾರು ಪಟ್ಟು ಹೆಚ್ಚಾಗಿದ್ದರೂ ರೈತರಿಗೆ ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿಯು ಈಗ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಅಬ್ಬರದ ಪ್ರಚಾರವನ್ನು ಯೋಜಿಸುವ ಮೂಲಕ ರೈತರ ಕಣ್ಣಿಗೆ ಮಣ್ಣೆರಚಲು ಬಯಸಿದೆ ಎಂದರು.
ನ.28ರಿಂದ 30ರವರೆಗೆ ದಿಲ್ಲಿಯಲ್ಲಿ ನಡೆಯಲಿರುವ ಕಿಸಾನ್ ಮಾರ್ಚ್ ಕುರಿತಂತೆ ಅವರು,ರೈತರು ಟ್ಯ್ರಾಕ್ಟರ್‌ಗಳಲ್ಲಿ ಆಗಮಿಸಲಿದ್ದಾರೆ. ನ.29ರಂದು ಅವರು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸೇರಲಿದ್ದಾರೆ. ಬೋಟ್ ಕ್ಲಬ್‌ನಲ್ಲಿ ರ್ಯಾಲಿಯನ್ನು ಸಂಘಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅನುಮತಿ ದೊರೆಯದಿದ್ದರೆ ರಾಮಲೀಲಾ ಮೈದಾನದಲ್ಲಿಯೇ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.







