ಸಲಿಂಗ ಕಾಮ,ವ್ಯಭಿಚಾರ ಕುರಿತ ಸುಪ್ರೀಂ ತೀರ್ಪು ತಿರಸ್ಕರಣೀಯ: ನಾಗಾಲ್ಯಾಂಡ್ ಚರ್ಚ್
ಕೊಹಿಮಾ,ನ.4: ಪರಸ್ಪರ ಒಪ್ಪಿಗೆಯ ಮೇರೆಗೆ ವಯಸ್ಕ ವ್ಯಕ್ತಿಗಳ ನಡುವಿನ ಸಲಿಂಗಕಾಮ ಮತ್ತು ವ್ಯಭಿಚಾರ ಅಪರಾಧವಲ್ಲ ಎಂದು ಘೋಷಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪುಗಳಿಗೆ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿರುವ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಮಂಡಳಿ(ಎನ್‌ಬಿಸಿಸಿ)ಯು,ಈ ತೀರ್ಪುಗಳು ಯಾವುದೇ ಸಂದರ್ಭದಲ್ಲಿಯೂ ಕ್ರೈಸ್ತರಿಗೆ ತಿರಸ್ಕರಣೀಯವಾಗಿವೆ ಮತ್ತು ಅಸ್ವೀಕಾರಾರ್ಹವಾಗಿವೆ ಎಂದು ಬಣ್ಣಿಸಿದೆ.
ಮಂಡಳಿಯು ಅ.30-31ರಂದು ನಡೆದ ತನ್ನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಪುಗಳ ಬಗ್ಗೆ ಸಮಗ್ರ ಚರ್ಚೆಗಳನ್ನು ನಡೆಸಿದೆ ಎಂದು ಎನ್‌ಬಿಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಕಾನೂನಿನ ಉತ್ತೇಜನ ಮತ್ತು ಬೆಂಬಲದೊಂದಿಗೆ ವ್ಯಭಿಚಾರಿಗಳಿಗೆ ಮತ್ತು ಅನೈಸರ್ಗಿಕ ಸಂಬಂಧಗಳಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡುವ ಈ ವ್ಯಾಖ್ಯಾನಗಳು ನಮ್ಮ ಸಮಾಜದ ಪಾಲಿಗೆ ಘೋರ ತಪ್ಪುಗಳಾಗಿವೆ ಎಂದು ಅದು ಹೇಳಿದೆ. ಇಂತಹ ಕಾನೂನುಗಳು ಬೈಬಲ್ ಮತ್ತು ಅದು ಪ್ರತಿಪಾದಿಸಿರುವ ನೈತಿಕತೆ ಮತ್ತು ನೀತಿಗಳಿಗೆ ಮರುವ್ಯಾಖ್ಯಾನವಾಗಿದೆ ಎಂದು ಭಾವಿಸದಂತೆ ಕ್ರೈಸ್ತರಿಗೆ ಎಚ್ಚರಿಕೆಯನ್ನು ನೀಡಿರುವ ಎನ್‌ಬಿಸಿಸಿ,ಮದುವೆ ಪುರುಷ ಮತ್ತು ಮಹಿಳೆಯ ನಡುವೆ ಮಾತ್ರ ನಡೆಯುತ್ತದೆ ಎಂದಿದೆ. ಸಲಿಂಗ ಕಾಮಕ್ಕೆ ತಾನೆಂದೂ ಅನುಮತಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಉತ್ತಮ ಪ್ರಜೆಗಳಾಗಿ ಈ ನೆಲದ ಕಾನೂನುಗಳಿಗೆ ನಾವು ಬದ್ಧವಾಗಿದ್ದೇವಾದರೂ,ತನ್ನ ಪ್ರಜೆಗಳ ನೈತಿಕತೆ ಮತ್ತು ನೀತಿಗಳನ್ನು ಸಡಿಲಿಸಲು ಅಥವಾ ರಾಜಿ ಮಾಡಿಕೊಳ್ಳಲು ಉದ್ದೇಶಪೂರ್ವಕವಾಗಿ ಕಾನೂನುಗಳನ್ನು ತಂದಾಗ ಇಂತಹ ನಡೆಗಳ ವಿರುದ್ಧ ಚರ್ಚ್ ಯಾವುದೇ ಬೆಲೆಯನ್ನು ತೆತ್ತಾದರೂ ಯಾವಾಗಲೂ ಬಲವಾದ ರಕ್ಷಣೆಯನ್ನು ನೀಡಬೇಕಾಗುತ್ತದೆ ಎಂದೂ ಅದು ಹೇಳಿದೆ.