ಪುಸ್ತಕಗಳು ಜೀವನದ ಸಂಗಾತಿ: ರಂಗಕರ್ಮಿ ಎಚ್.ಜಿ.ಸೋಮಶೇಖರ್

ಬೆಂಗಳೂರು, ನ.4: ಪುಸ್ತಕಗಳು ನಮ್ಮ ಜೀವನದ ಸಂಗಾತಿಯಿದ್ದಂತೆ. ಪ್ರತಿಯೊಬ್ಬರೂ ದಿನದಲ್ಲಿ ಒಂದು ಗಂಟೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ರಂಗಕರ್ಮಿ ಎಚ್.ಜಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಶ್ರೀನಿವಾಸನಗರದಲ್ಲಿರುವ ನಾಡಪ್ರಭು ಕೆಂಪೇಗೌಡ ಉದ್ಯಾನವನದಲ್ಲಿ ಆಯೋಜಿಸಿದ್ದ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುಸ್ತಕಗಳು ಮನುಷ್ಯನ ಒಂಟಿತನ, ಖಾಲಿತನವನ್ನು ಪೂರ್ತಿ ಮಾಡಿ, ನಾವಿರುವಷ್ಟು ದಿನವೂ ನಮ್ಮ ಸಂಗಾತಿಯಾಗಿರುತ್ತವೆ. ಪುಸ್ತಕಗಳ ಅಧ್ಯಯನ ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವೂ ಆಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಾವು ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಸಾಧನೆ ಮಾಡಿರುವಂತಹ ಸಾಹಿತಿಗಳನ್ನು ಮರೆಯುತ್ತಿದ್ದೇವೆ. ನಮ್ಮ ನಾಡಿಗೆ ಶ್ರೀಮಂತಿಕೆಯನ್ನು ತಂದುಕೊಟ್ಟವರನ್ನು ಮೂಲೆಗುಂಪು ಮಾಡುವುದು ಸರಿಯಾದ ಕ್ರಮವಲ್ಲ ಎಂದ ಅವರು, ನಮ್ಮ ನಾಡಿನ ಹೆಮ್ಮಯ ಸಾಹಿತಿ ಕುವೆಂಪು ಅವರ ಕೃತಿಗಳು ಪ್ರತಿಯೊಬ್ಬರ ಮನೆಯಲ್ಲಿಯೂ ಇಟ್ಟುಕೊಳ್ಳುವಂತಾಗಬೇಕು ಎಂದು ಹೇಳಿದರು.
ಪುಸ್ತಕ ಓದುವುದರಿಂದ ನಮ್ಮಲ್ಲಿ ಆಲೋಚನಾ ಶಕ್ತಿ ಹೆಚ್ಚುತ್ತದೆ. ಕೆಲವು ಪುಸ್ತಕಗಳನ್ನು ಓದಿ ಅರಗಿಸಿಕೊಳ್ಳುತ್ತೇವೆ, ಮತ್ತೊಂದಿಷ್ಟು ನಮ್ಮ ಆಲೋಚನಾ ಶಕ್ತಿಗೆ ಸವಾಲಾಗುತ್ತದೆ ಹಾಗೂ ಚಿಂತನೆಗೆ ಹಚ್ಚುತ್ತದೆ. ಹೀಗಾಗಿ, ಹಿರಿಯ ಕವಿ.ದ.ರಾ.ಬೇಂದ್ರೆ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಹಲವು ಸಾಹಿತಿಗಳ ಪುಸ್ತಕಗಳು ಓದು, ನವ್ಯ ಬದುಕನ್ನು ಕಟ್ಟಿಕೊಡಲಿವೆ. ಪುಸ್ತಕ ಓದುವ ಸಂಸ್ಕೃತಿಯನ್ನು ಹುಟ್ಟುಹಾಕುವ ಮೂಲಕ ಮುಂದಿನ ಪೀಳಿಗೆಗೆ ನಾವು ದಾರಿ ದೀಪವಾಗಬೇಕು ಎಂದು ನುಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಯುವ ಪೀಳಿಗೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಬಿತ್ತುವ ಸಲುವಾಗಿ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಮನೆ ಮನೆಗೆ ಪುಸ್ತಕ ಎಂಬ ಕಾರ್ಯಕ್ರಮವೂ ಅದರ ಅಡಿಯಲ್ಲಿ ಸೇರಿದೆ ಎಂದರು. ನಾಡಿನ ಎಲ್ಲರ ಮನೆಯಲ್ಲಿಯೂ ಶೋಕೇಸ್ ಎಷ್ಟು ಮುಖ್ಯವೋ, ಅಷ್ಟೇ ಪ್ರಮಾಣದಲ್ಲಿ ಗ್ರಂಥಾಲಯವನ್ನೂ ಸ್ಥಾಪನೆ ಮಾಡಬೇಕು ಎಂದ ಅವರು, ದೀಪಾವಳಿ ಹಬ್ಬ ಸಮೀಪಿಸಿದ್ದು ಹಬ್ಬದ ಸಂದರ್ಭದಲ್ಲಿ ಮನೆಗಳಿಗೆ ಬರುವ ಅತಿಥಿಗಳಿಗೆ, ಸಂಬಂಧಿಕರಿಗೆ ಒಂದು ಪುಸ್ತಕ ಉಡುಗರೆ ನೀಡುವ ಮೂಲಕ ವಿಭಿನ್ನವಾದ ರೀತಿಯಲ್ಲಿ ಹಬ್ಬ ಆಚರಣೆ ಮುಂದಾಗಬೇಕು ಎಂದು ಹೇಳಿದರು.ಪ್ರತಿಯೊಬ್ಬ ಮನುಷ್ಯನಿಗೂ ಪುಸ್ತಕ ಎಂಬುದು ಬದುಕಿನ ಭಾಗವಾಗಬೇಕು. ಆಗ ಅಷ್ಟೇ ಪರಿಪೂರ್ಣ ಮನುಷ್ಯರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ. ನಾಡಿನ ಖ್ಯಾತ ಕವಿ ಕುವೆಂಪು ಅವರು ತೀರ್ಥಹಳ್ಳಿಯಲ್ಲಿದ್ದ ಗ್ರಂಥಾಲಯದ ಎಲ್ಲ ಪುಸ್ತಕಗಳನ್ನು ಓದಿದ ಮೊದಲಿಗರಾಗಿದ್ದರು. ಅಲ್ಲದೆ, ಲಂಡನ್‌ನ ಗ್ರಂಥಾಲಯದಲ್ಲಿರುವ ಎಲ್ಲ ಪುಸ್ತಕಗಳನ್ನು ಓದಿದವರು ಅಂಬೇಡ್ಕರ್ ಮತ್ತು ಮಾರ್ಕ್ಸ್ ಆಗಿದ್ದರು. ಅದೇ ರೀತಿಯಲ್ಲಿ ಇಂದಿನ ಯುವ ಸಮುದಾಯ ಹೆಚ್ಚು ಓದಿನ ಕಡೆ ಆಕರ್ಷಿತರಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಎ.ಕೃಷ್ಣನಾಯ್ಡು, ಕೆ.ಎಸ್.ಕೇಶವರೆಡ್ಡಿ ಉಪಸ್ಥಿತರಿದ್ದರು.







