ಶಾಲಾ ಶಿಕ್ಷಣದಿಂದ ಹೊರಗುಳಿದ 82 ಸಾವಿರ ಮಕ್ಕಳು

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.3: ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕಾರ ರಾಜ್ಯದಲ್ಲಿ 82,713 ವಿದ್ಯಾರ್ಥಿಗಳು ಶಾಲಾ ಶಿಕ್ಷಣದಿಂದ ಹೊರಗುಳಿದಿರುವುದು ಕಂಡುಬಂದಿದ್ದು, ಈ ಎಲ್ಲ ವಿದ್ಯಾರ್ಥಿಗಳನ್ನು ಪುನರ್ ಶಾಲೆಗೆ ಕರೆತರಲು ವಿಸ್ತೃತ ತನಿಖೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.
ವಿಸ್ತೃತ ತನಿಖೆ ನಡೆಸುವ ಸಲುವಾಗಿ ನ.14ರಿಂದ ಆರಂಭಗೊಳ್ಳುವ ಸಮೀಕ್ಷೆ ಡಿ.24ರವರೆಗೂ ನಡೆಯಲಿದೆ. ಇದಕ್ಕಾಗಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಶಾಲಾ ಹಂತದಲ್ಲಿ ಶಾಲೆಗೆ ಸೇರಿ, ಮಧ್ಯಂತರವಾಗಿ ಬಿಟ್ಟಿರುವ ಮಕ್ಕಳನ್ನು ಗುರುತಿಸುವುದು, ಮರಣ, ನಕಲಿ ದಾಖಲಾತಿ ಪರಿಶೀಲನೆ ಸೇರಿದಂತೆ ಮಕ್ಕಳ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿ ಸಾಧನೆ ಟ್ರಾಕಿಂಗ್ ವ್ಯವಸ್ಥೆ(ಎಸ್ಎಟಿಎಸ್)ಗೆ ಅಪ್ಡೇಟ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಎರಡನೇ ಹಂತವಾಗಿ ಕಾರಾಗೃಹ, ಕಟ್ಟಡ ಕಾಮಗಾರಿ ನಡೆಯುವ ಸ್ಥಳ, ಮದರಸದಲ್ಲಿ ಕಲಿಯುತ್ತಿರುವ ಮಕ್ಕಳು ಸೇರಿದಂತೆ ಗಣಿ ಪ್ರದೇಶ, ಕ್ವಾರಿ, ಬಂದರು ಪ್ರದೇಶ ಇನ್ನಿತ ಪ್ರದೇಶದಲ್ಲಿರುವ ಮಕ್ಕಳ ಪರಿಶೀಲನೆ ಮಾಡಬೇಕು. ಆಧಾರ್ ಬಗ್ಗೆ ಕ್ರಮ, ಶಾಲೆ ಬಿಟ್ಟ ಹಾಗೂ ಶಾಲೆಗೆ ದಾಖಲಾದ ಮಕ್ಕಳನ್ನು ಎಸ್ಎಟಿಎಸ್ಗೆ ಅಪ್ಡೇಟ್ ಮಾಡಬೇಕು. ಹೊರ ರಾಜ್ಯದಿಂದ ಬಂದಿರುವ ಹಾಗೂ ಹೊರ ರಾಜ್ಯಕ್ಕೆ ವಲಸೆ ಹೋಗಿರುವ ಮಕ್ಕಳ ವಿವರವನ್ನು ಪ್ರತ್ಯೇಕ ನಮೂನೆಯಲ್ಲಿ ನೀಡಬೇಕು ಎಂದು ಇಲಾಖೆ ನಿರ್ದೇಶಿಸಿದೆ.
ಸರ್ವೆ ಕಾರ್ಯದಲ್ಲಿ ಎಜಿಒಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಅಂತಿಮವಾಗಿ ಪಡೆದ ಎಲ್ಲ ಮಾಹಿತಿಯನ್ನು 2019-20ನೇ ಸಾಲಿನ ಸಮಗ್ರ ಶಿಕ್ಷಣ ಅಭಿಯಾನ ಜಿಲ್ಲಾ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ವೇಳಾಪಟ್ಟಿ: ನ.14ರಿಂದ ನಡೆಯುವ ಶಾಲಾ ಮುಖ್ಯಶಿಕ್ಷಕರು ಶಾಲೆಯಿಂದ ಹೊರಗುಳಿದ ಮತ್ತು ಶಾಲೆಗೆ ದಾಖಲಾದ ಹಾಗೂ ಎಸ್ಎಟಿಎಸ್ ತಂತ್ರಾಂಶದಲ್ಲಿ ಅಪ್ಡೇಟ್ ಆಗದ ಮಕ್ಕಳ ಮಾಹಿತಿಯನ್ನು ಮಕ್ಕಳ ಗ್ರಾಮಸಭೆಯಲ್ಲಿ ಹಂಚಿಕೊಳ್ಳಬೇಕು. ನ.17ರಿಂದ 28ರವರೆಗೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ತಂಡದೊಂದಿಗೆ ಮನೆ-ಮನೆ ಮತ್ತು ಇತರೆ ಸ್ಥಳಗಳಲ್ಲಿ ಭೇಟಿ ನೀಡಿ, ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಬೇಕು. ಸಂಗ್ರಹಿಸಿದ ಎಲ್ಲ ಮಾಹಿತಿಯನ್ನು ನ.29ರಿಂದ ಡಿ.15ರೊಳಗೆ ಎಸ್ಎಟಿಎಸ್ಗೆ ಅಳವಡಿಸಬೇಕು ಎಂದು ಸೂಚಿಸಿದೆ.







