ಶಿವಮೊಗ್ಗ ಲೋಕಸಭಾ ಕ್ಷೇತ್ರ: ಭದ್ರ ಕೊಠಡಿಯಲ್ಲಿ ಅಭ್ಯರ್ಥಿಗಳ ಭವಿಷ್ಯ
ಬಿಗು ಪೊಲೀಸ್ ಪಹರೆ

ಶಿವಮೊಗ್ಗ, ನ.4: ಶಿವಮೊಗ್ಗ ಲೋಕಸಭೆ ಉಪಚುನಾವಣೆಯ ಮತಯಂತ್ರಗಳನ್ನು ನಗರದ ಸಹ್ಯಾದ್ರಿ ಕಾಲೇಜು ಕಟ್ಟಡದಲ್ಲಿ ದಾಸ್ತಾನು ಮಾಡಲಾಗಿದೆ. ಮತಯಂತ್ರಗಳನ್ನು ಕಾಲೇಜು ಕಟ್ಟಡದಲ್ಲಿನ ಸ್ಟ್ರಾಂಗ್ ರೂಂನಲ್ಲಿಡಲಾಗಿದೆ. ರವಿವಾರ ಬೆಳಗ್ಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮತಯಂತ್ರಗಳ ಕೊಠಡಿಗೆ ಬೀಗ ಹಾಕಿ ಸೀಲ್ ಹಾಕಲಾಯಿತು. ಕಟ್ಟಡದ ಸುತ್ತಮುತ್ತ ಬಿಗು ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ.
ಕಾಲೇಜು ಆವರಣದಲ್ಲಿ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇದೇ ಕಟ್ಟಡದಲ್ಲಿ ನ.6ರಂದು ಮತ ಎಣಿಕೆ ನಡೆಯಲಿದೆ. ಅಂದು ಬೆಳಗ್ಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಕೊಠಡಿಯ ಬೀಗ ತೆರೆಯಲಾಗುತ್ತದೆ. ಶನಿವಾರ ರಾತ್ರಿಯಿಂದಲೇ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಬಿಗಿ ಪೊಲೀಸ್ ಪಹರೆಯಲ್ಲಿ ಹಾಗೂ ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ, ಸಹ್ಯಾದ್ರಿ ಕಾಲೇಜು ಕಟ್ಟಡಕ್ಕೆ ತರಲಾಯಿತು. ಈ ಪ್ರಕ್ರಿಯೆ ಮುಂಜಾನೆಯವರೆಗೂ ಮುಂದುವರಿದಿತ್ತು. ಇದರಿಂದ ಕೆಲ ಅಧಿಕಾರಿ, ಸಿಬ್ಬಂದಿ ನಿದ್ರೆಯಿಲ್ಲದ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.
ಮತದಾನದ ವಿವರ: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ. 65.25ರಷ್ಟು ಮತದಾನವಾಗಿದೆ. ಒಟ್ಟು 16,46,055 ಮತದಾರರಲ್ಲಿ, 10,73,992 ಜನರು ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 5,35,087 ಪುರುಷ (ಶೇ. 49.82) ಹಾಗೂ 5,38,905 ಮಹಿಳೆಯರು (ಶೇ. 50.18) ಮತ ಹಾಕಿದ್ದಾರೆ. ಮತದಾನದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿರುವುದು ಕಂಡುಬರುತ್ತದೆ. ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ಸೊರಬ ವಿಧಾನಸಭಾ ಕ್ಷೇತ್ರದಲ್ಲಾಗಿದ್ದು, ಶೇ.78.05 ಮತದಾನವಾಗಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಶೇ.51.45ರಷ್ಟು ಮತದಾನವಾಗಿದೆ.
ವಿವರ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,10,964 ಮತದಾರರಿದ್ದು, 1,47,493 ಜನರು ಹಕ್ಕು ಚಲಾಯಿಸಿದ್ದಾರೆ (ಶೇ.69.91). ಭದ್ರಾವತಿಯಲ್ಲಿ 2,06,540 ಮತದಾರರಲ್ಲಿ 1,17,677 ಜನ ಮತದಾನ ಮಾಡಿದ್ದಾರೆ (ಶೇ. 56.98). ಶಿವಮೊಗ್ಗ ನಗರದಲ್ಲಿ 2,56,062 ರಲ್ಲಿ 1,31,734 ಮತದಾರರು ಮತದಾನ ಮಾಡಿದ್ದಾರೆ (ಶೇ. 51.45). ತೀರ್ಥ ಹಳ್ಳಿ 1,83,050 ರಲ್ಲಿ 1,28,604 ಜನರು ಮತದಾನ ಮಾಡಿದ್ದಾರೆ (ಶೇ. 70.26), ಶಿಕಾರಿಪುರದಲ್ಲಿ 1,88,787 ರಲ್ಲಿ 1,40,056 ಜನರು ಮತದಾನ ಮಾಡಿದ್ದಾರೆ (ಶೇ. 74.19). ಸೊರಬದಲ್ಲಿ 1,84, 459 ರಲ್ಲಿ 1,43,979 ಜನರು ಮತ ಹಾಕಿದ್ದಾರೆ (ಶೇ. 78.05). ಸಾಗರದಲ್ಲಿ 1,94,221 ರಲ್ಲಿ 1,33,705 ಜನರು ಮತದಾನ ಮಾಡಿದ್ದಾರೆ (ಶೇ. 68.84). ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,21,972 ಇದ್ದು, 1,30,744 ಜನರು ಹಕ್ಕು ಚಲಾಯಿಸಿದ್ದಾರೆ (ಶೇ. 58.90).
ವಿಧಾನಸಭೆ ಶೇಕಡವಾರು: ಕಳೆದ ಆರು ತಿಂಗಳ ಹಿಂದೆ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ, ಶಿವಮೊಗ್ಗ ಕ್ಷೇತ್ರದ (ಬೈಂದೂರು ಹೊರತುಪಡಿಸಿ) ಏಳು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.78.08 ರಷ್ಟು ಮತದಾನವಾಗಿತ್ತು. ಶಿವಮೊಗ್ಗ ಗ್ರಾ. ಶೇ.81.07, ಭದ್ರಾವತಿ - ಶೇ.73.13, ಶಿವಮೊಗ್ಗ -ಶೇ.66.58, ತೀರ್ಥಹಳ್ಳಿ - ಶೇ.84.83, ಶಿಕಾರಿಪುರ - ಶೇ. 81.65, ಸೊರಬ - ಶೇ.84.47, ಸಾಗರ - ಶೇ.79.35 ರಷ್ಟು ಮತದಾನವಾಗಿತ್ತು.
ರಿಲ್ಯಾಕ್ಸ್ ಮೂಡ್: ಮತ್ತೊಂದೆಡೆ ಇಷ್ಟು ದಿನ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದ ಅಭ್ಯರ್ಥಿಗಳೀಗ ಯುದ್ಧ ಮುಕ್ತಾಯವಾದ ಮೂಡ್‌ನಲ್ಲಿದ್ದಾರೆ. ರಿಲ್ಯಾಕ್ಸ್ ಆಗಲು ಯತ್ನಿಸುತ್ತಿದ್ದಾರೆ. ಆದರೆ ಫಲಿತಾಂಶ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ. ತಮ್ಮ ಕ್ಷೇತ್ರ ವ್ಯಾಪ್ತಿಗಳಲ್ಲಿ ನಡೆದ ಮತದಾನದ ವಿವರಗಳನ್ನು ಬೆಂಬಲಿಗರ ಮೂಲಕ ಪಡೆಯುತ್ತಿದ್ದಾರೆ. ಮತದಾರರಿಗಿದ್ದ ‘ಡಿಮ್ಯಾಂಡ್’ ಸಂಪೂರ್ಣ ಕಡಿಮೆಯಾಗಿದೆ. ಇಷ್ಟು ದಿನ ಕಂಡಕಂಡಲ್ಲಿ ಮತದಾರರ ಕೈಗೆ ಸಿಗುತ್ತಿದ್ದ, ಕಾಲಿಗೆ ಬೀಳುತ್ತಿದ್ದ, ಬೇಡ ಬೇಡ ಎಂದರೂ ಬೆನ್ನು ಬೀಳುತ್ತಿದ್ದ ಅಭ್ಯರ್ಥಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಇದೀಗ ನಾಪತ್ತೆಯಾಗಿದ್ದಾರೆ.
ಬೆಟ್ಟಿಂಗ್ ಬಲು ಜೋರು
ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿರುವ ಕ್ಷೇತ್ರದಲ್ಲಿ, ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸುಗೊಂಡಿದೆ. ಇದರ ಜೊತೆಗೆ ಬೆಟ್ಟಿಂಗ್ ಭರಾಟೆ ಕೂಡ ಸಖತ್ ಜೋರಾಗಿದೆ. ಕನಿಷ್ಠ ಸಾವಿರ ರೂ.ಗಳಿಂದಿಡಿದು ಲಕ್ಷ ರೂ.ಗೂ ಮೇಲ್ಪಟ್ಟು ಬೆಟ್ಟಿಂಗ್ ಕಟ್ಟಲಾಗುತ್ತಿದೆ ಎಂಬ ಮಾತನ್ನು ಜುಗಾರಿ ಅಡ್ಡೆಯ ಮಾಹಿತಿಗಳು ಹೇಳುತ್ತವೆ. ಇದಕ್ಕಿಂತ ಮುಖ್ಯವಾಗಿ ಕೆಲ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿಯೂ ಕೂಡ ಬೆಟ್ಟಿಂಗ್ ನಡೆಯುತ್ತಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾಗಿರುವ ಮತಗಳು, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುವ ಫ್ಯಾಕ್ಟರ್‌ಗಳು, ತಳಮಟ್ಟದ ಲೆಕ್ಕಾಚಾರದ ಆಧಾರದ ಮೇಲೆ ಕೆಲವರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಜುಗಾರಿ ಅಡ್ಡೆ ಮೂಲಗಳು ಮಾಹಿತಿ ನೀಡುತ್ತವೆ.







