ಚಿಕ್ಕಮಗಳೂರು: ಅರಣ್ಯಾಧಿಕಾರಿಗಳಿಂದ ಅಕ್ರಮ ಗುಡಿಸಲುಗಳ ತೆರವು

ಚಿಕ್ಕಮಗಳೂರು, ನ.4: ಅರಣ್ಯ ಇಲಾಖೆಗೆ ಸೇರಿದ್ದ ಜಾಗವನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ನಿರ್ಮಾಣ ಹಂತದ ಮನೆಗಳೂ ಸೇರಿದಂತೆ ಹತ್ತಾರು ಗುಡಿಸಲುಗಳನ್ನು ಅರಣ್ಯಾಧಿಕಾರಿಗಳು ತೆರವು ಮಾಡಿದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಸಿಂಸ ಗ್ರಾಮದಲ್ಲಿ ರವಿವಾರ ನಡೆದಿದೆ.
ಸಿಂಸ ಗ್ರಾಮ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶ ಎಂದು ಹೇಳಲಾಗುತ್ತಿರುವ ಜಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಭೋವಿ ಸಮುದಾಯದ ಗುಡಿಸಲು ಹಾಗೂ ನಿರ್ಮಾಣ ಹಂತದ ಮನೆಗಳನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು. ಈ ಜಾಗದಲ್ಲಿ ಭೋವಿ ಸಮುದಾಯದವರು ಸುಮಾರು 10 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರೆಂದು ಹೇಳಲಾಗುತ್ತಿದೆ.
ಅರಣ್ಯಾಧಿಕಾರಿಗಳು ಗುಡಿಸಲುಗಳ ತೆರವಿಗೆ ಈ ಹಿಂದೆ ಅನೇಕ ಬಾರಿ ಸೂಚನೆ ನೀಡಿತ್ತು. ಆದರೆ ನಿವಾಸಿಗಳು ಸ್ಥಳದಿಂದ ಕದಲಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಗುಡಿಸಲುಗಳ ತೆರವು ವೇಳೆ ನಿವಾಸಿಗಳು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಇನ್ನು ಕೆಲ ಗುಡಿಸಲು ನಿವಾಸಿಗಳು ಮನೆ ನಿರ್ಮಾಣಕ್ಕೆ ತಂದು ಹಾಕಿದ್ದ ಇಟ್ಟಿಗೆ ಕಲ್ಲುಗಳು, ಮರಳುರಾಶಿಗಳನ್ನೂ ತೆರವು ಮಾಡಿದರು. ಈ ವೇಳೆ ನಿವಾಸಿಗಳು ಅಸಹಾಯಕರಾಗಿ ತೆರವು ಕಾರ್ಯಾಚರಣೆಯನ್ನು ನೋಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.







