ಮಂಡ್ಯ: ಪರಿಸರ ಪ್ರೇಮ ಮೆರೆದ ನೂತನ ದಂಪತಿ; ಆರತಕ್ಷತೆಗೆ ಆಗಮಿಸಿದವರಿಗೆ ಸಸಿ ವಿತರಣೆ

ಮಂಡ್ಯ, ನ.4: ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ ನಡೆದ ಮದುವೆ ಅರತಕ್ಷತೆಗೆ ಆಗಮಿಸಿದ್ದ ಸುಮಾರು 2 ಸಾವಿರ ಜನರಿಗೆ ನೂತನ ದಂಪತಿ ವಿವಿಧ ಜಾತಿಯ ಸಸಿಗಳನ್ನು ನೀಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಹುಣಸೇಮರದೊಡ್ಡಿ ಗ್ರಾಮದ ಮಲ್ಲಿಕಾ ಅಣ್ಣಯ್ಯ ದಂಪತಿ ಪುತ್ರ ಎಚ್.ಎ.ಮನು ಮತ್ತು ಅಕ್ಕೂರು ಗ್ರಾಮದ ವೀಣಾ ಪುಟ್ಟಸ್ವಾಮಿ ದಂಪತಿ ಪುತ್ರಿ ಎಂ.ಪಿ.ಕಾವ್ಯ ವಿವಾಹ ಆ.31 ರಂದು ಧರ್ಮಸ್ಥಳದಲ್ಲಿ ಸರಳವಾಗಿ ನಡೆದಿತ್ತು.
ಈ ಸಂಬಂಧ ರವಿವಾರ ಅರತಕ್ಷತೆ ಮತ್ತು ಬೀಗರ ಔತಣ ಹಮ್ಮಿಕೊಂಡು ಆಗಮಿಸಿದ ಬಂಧುಬಳಗದವರಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಮತ್ತು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ ಪರಿಸರ ಜಾಗೃತಿಗೆ ಪ್ರೇರೇಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ದಂಪತಿ, ಪರಿಸರ ಉಳಿದರೆ ಮಾತ್ರ ಭೂಮಿ ಮೇಲೆ ಸಕಲ ಜೀವರಾಶಿ ಬದುಕಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಮ್ಮ ಮದುವೆ ಅರತಕ್ಷತೆ ಪರಿಸರದ ಬಗೆ ಜಾಗೃತಿ ಮೂಡಿಸಲು ಮತ್ತು ಬೆಳೆಸಲು ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಮಾದನಾಯಕಹಳ್ಳಿ ರಾಜಣ್ಣ, ತೊಪ್ಪನಹಳ್ಳಿ ಪ್ರಕಾಶ್, ಬ್ಯಾಡರಹಳ್ಳಿ ಶಿವಕುಮಾರ್, ಚನ್ನೇಗೌಡ, ಸಂತೋಷ್ ಇನ್ನಿತರ ಮುಖಂಡರು ಹಾಜರಿದ್ದರು.





