ಟಿಪ್ಪು ಜಯಂತಿ: ಕೊಡಗು ಜಿಲ್ಲಾಡಳಿತದಿಂದ ಮುಂಜಾಗೃತಾ ಕ್ರಮ

ಮಡಿಕೇರಿ, ನ.5: ನವೆಂಬರ್ 10ರಂದು ನಡೆಯುವ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗೃತೆ ಹಾಗೂ ಬಂದೋಬಸ್ತ್ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಟಿಪ್ಪು ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನವೆಂಬರ್ 10 ರಂದು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ವಿರಾಜಪೇಟೆಯ ತಾಲೂಕು ಕಚೇರಿಯಲ್ಲಿ ಮತ್ತು ಸೋಮವಾರಪೇಟೆಯ ಜೂನಿಯರ್ ಕಾಲೇಜಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ನಡೆಯಲಿದೆ ಎಂದು ಹೇಳಿದರು. ಶಾಂತಿ ಸುವ್ಯವಸ್ಥೆಗೆ ಭಂಗ ತರುವವರನ್ನು ನಿರ್ಧಾಕ್ಷೀಣ್ಯವಾಗಿ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ: ಸರ್ಕಾರದ ನಿರ್ದೇಶನದಂತೆ ಇದೇ ನ.10 ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿದ್ದು, ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕೋರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ಮುಖಂಡರೊಂದಿಗೆ ಸೋಮವಾರ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಶಾಂತಿ ಸುವ್ಯವಸ್ಥೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಅಶಾಂತಿ ಉಂಟಾಗಬಾರದು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು. ಟಿಪ್ಪು ಜಯಂತಿ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿದ್ದು, ಖಾಸಗಿಯವರು ಪ್ರತ್ಯೇಕವಾಗಿ ಜಯಂತಿ ಆಚರಣೆ ಮಾಡದಂತೆ ತಿಳಿಸಿದರು. ಕಾರ್ಯಕ್ರಮದ ಸಂಬಂಧ ಯಾವುದೇ ರೀತಿಯ ಪ್ಲೇಕ್ಸ್, ಬ್ಯಾನರ್, ಪೋಸ್ಟರ್ ಗಳನ್ನು ಬಳಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಆ ದಿಸೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಭದ್ರತೆ ಕೊಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಆ ದಿಸೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಜಿಲ್ಲೆಗೆ ಯಾವುದೇ ರೀತಿಯ ಕಳಂಕ ಉಂಟಾಗದಂತೆ, ಎಲ್ಲರೂ ಒಟ್ಟಿಗೆ ಸೇರಿ ಶಾಂತಿ ಕಾಪಾಡಲು ಸಹಕರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಅವರು ಕೋರಿದರು. ಶಾಂತಿ ಸಭೆಯಲ್ಲಿ ಪ್ರಸನ್ನ ಭಟ್ಟ, ವಿನಯ, ಕೆ.ಎಂ.ಗಣೇಶ್, ಮೋಹಿನುದ್ದಿನ್, ಯೂಸಫ್, ಟಿ ನರಸಿಂಹ, ಭರತೇಶ್ ಇತರರು ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್, ಪೊಲೀಸ್ ವೃತ್ತ ನಿರೀಕ್ಷರಾದ ಐ.ಪಿ.ಮೇದಪ್ಪ, ಇತರರು ಹಾಜರಿದ್ದರು.







