ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ: ಶೂದ್ರ ಶ್ರೀನಿವಾಸ್

ಬೆಂಗಳೂರು, ನ. 5: ಜೀವನದಲ್ಲಿ ಪ್ರತಿಯೊಬ್ಬರೂ ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಶೂದ್ರ ಶ್ರೀನಿವಾಸ್ ಸಲಹೆ ನೀಡಿದ್ದಾರೆ.
ಸೋಮವಾರ ನಗರದ ಗರುಡಾ ಮಾಲ್‌ನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಪುಸ್ತಕ ದಾನ ಅಭಿಯಾನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಲ, ದೇಶಗಳ ಮಿತಿಯಿಲ್ಲದೆ ಹಲವಾರು ಅನುಭವಗಳ ಸಾರ ಪುಸ್ತಕಗಳಿಂದ ಸಿಗುತ್ತದೆ. ಜ್ಞಾನ ಅಳಿಯದಂತೆ ರಕ್ಷಿಸಿಕೊಂಡು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಮತ್ತು ಯುವಜನರಲ್ಲಿ ಪುಸ್ತಕ ಓದುವ ಅಭ್ಯಾಸ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಅಲ್ಲದೆ, ಹಲವು ಶಿಕ್ಷಕರಲ್ಲಿಯೂ ಈ ಬೆಳವಣಿಗೆ ಕಂಡುಬಂದಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಹಾಗೂ ಶಿಕ್ಷಕರಲ್ಲಿ ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಆ ಮೂಲಕ ಪುಸ್ತಕಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
ನಮ್ಮ ವ್ಯವಸ್ಥೆಯಲ್ಲಿನ ಹಲವು ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಪುಸ್ತಕ ಓದುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಆದರೆ, ಇತ್ತೀಚಿನ ಅಧಿಕಾರಿ ಮತ್ತು ರಾಜಕಾರಣಿಗಳು ಪುಸ್ತಕ ಓದುವ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎಂದ ಅವರು, ದೇವರಾಜ ಅರಸು ಅಪಾರವಾದ ಜ್ಞಾನ ಸಂಪತ್ತನ್ನು ಪುಸ್ತಕಗಳಿಂದ ಪಡೆದುಕೊಂಡಿದ್ದರು. ಅಲ್ಲದೆ, ಅಮೆರಿಕಾ ಮಾಜಿ ಅಧ್ಯಕ್ಷ ಒಬಮಾ ಮೊದಲ ಬಾರಿಗೆ ಆಯ್ಕೆಯಾದ ಸಂದರ್ಭದಲ್ಲಿ ಅತ್ಯುತ್ತಮ 10 ಪುಸ್ತಕಗಳನ್ನು ತರಿಸಿಕೊಂಡಿದ್ದರು. ಅದರಲ್ಲಿ ಮಹಾತ್ಮಗಾಂಧಿ ಪುಸ್ತಕವೂ ಇತ್ತು ಎಂದು ಅವರು ಹೇಳಿದರು.
ಶಾಸಕ ಉದಯ ಬಿ ಗರುಡಾಚಾರ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕ ಓದುವ ಅಭ್ಯಾಸ ನಶಿಸಿಹೋಗುತ್ತಿದೆ. ಮತ್ತೊಂದು ಆಧುನಿಕತೆಯ ಅಡಿಯಲ್ಲಿ ಎಲ್ಲವೂ ಕೈಯಲ್ಲಿ ಸಿಗುತ್ತಿರುವುದರಿಂದ ಪುಸ್ತಕಗಳ ಮುಂದೆ ಕೂತು ಓದುವ ಪದ್ಧತಿ ಕಳೆದು ಹೋಗುತ್ತಿದೆ. ಆದರೆ, ಒಂದು ಪುಸ್ತಕವನ್ನು ಆಸ್ವಾದಿಸಿ ಓದುವುದಕ್ಕಿಂತ ಅಂತರ್ಜಾಲದಲ್ಲಿ ಓದಲು ಸಾಧ್ಯವಿಲ್ಲ ಎಂದು ನುಡಿದರು.
ಪುಸ್ತಕಗಳನ್ನು ಓದುವುದರಿಂದ ಅಕ್ಷರ ಜ್ಞಾನ ಹಾಗೂ ಬೌದ್ಧಿಕ ಪ್ರಜ್ಞೆಯೂ ಬೆಳೆಯುತ್ತದೆ ಎಂದ ಅವರು, ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗಿದೆ. ಅದು ಒಂದು ತಿಂಗಳ ಕಾಲ ಇದೇ ಮಾಲ್‌ನಲ್ಲಿ ಇರಿಸಲಾಗುತ್ತದೆ. ಪುಸ್ತಕ ಓದಿ ಪೂರ್ತಿ ಮಾಡಿದವರು ಅದನ್ನು ಗ್ರಂಥಾಲಯಗಳಿಗೆ ದಾನ ಮಾಡಬಹುದು. ಆ ಮೂಲಕ ಅಕ್ಷರ ಜ್ಞಾನದ ಅರಿವನ್ನು ಮತ್ತಷ್ಟು ಜನರಿಗೆ ತಲುಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಮಾತನಾಡಿ, ನಗರದಲ್ಲಿರುವ ಶಾಪಿಂಗ್ ಮಾಲ್‌ಗಳಿಗೆ ಬರುವ ಸಾರ್ವಜನಿಕರು, ಲೇಖಕರು, ಪ್ರಕಾಶಕರು ಉತ್ತಮ ಪುಸ್ತಕಗಳನ್ನು ದಾನ ಮಾಡುವ ಮೂಲಕ ಹೆಚ್ಚಿನ ಪುಸ್ತಕ ಓದುಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಪುಸ್ತಕ ದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅಡಿಯಲ್ಲಿ ಒಂದು ಕಡೆಯಿಂದ 1 ಸಾವಿರ ಪುಸ್ತಕಗಳು ದಾನದ ರೂಪದಲ್ಲಿ ಸಿಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ನಗರದ ಐದು ವಲಯಗಳಲ್ಲಿ 200 ಕ್ಕೂ ಅಧಿಕ ಗ್ರಂಥಾಲಯಗಳಿದ್ದು, ಸಾವಿರಾರು ಓದುಗರು ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ, ಈ ಅಭಿಯಾನದ ಮೂಲಕ ಮತ್ತಷ್ಟು ಪುಸ್ತಕಗಳ ಸಂಖ್ಯೆ ಹಾಗೂ ಓದುಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಪುಸ್ತಕ ದಾನ ಅಭಿಯಾನ
ನ.9 ರಂದು ಗೋಪಾಲನ್ ಮಾಲ್, ನ.13 ರಂದು ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್, ನ.15 ರಂದು ಕೆಂಪಾಪುರದಲ್ಲಿರುವ ಎಲೆಮೆಂಟ್ ಮಾಲ್ ಹಾಗೂ ನ.16 ರಂದು ಫೋರಂ ಮಾಲ್‌ನಲ್ಲಿ ಅಭಿಯಾನ ನಡೆಸಿ ಪುಸ್ತಕಗಳನ್ನು ಸಂಗ್ರಹ ಮಾಡಲಾಗುತ್ತದೆ.
-ಡಾ.ಸತೀಶಕುಮಾರ ಎಸ್.ಹೊಸಮನಿ, ಗ್ರಂಥಾಲಯ ಇಲಾಖೆಯ ನಿರ್ದೇಶಕ







