ಹೊಸ ವಿವಿಗಳ ಆಸ್ತಿಯ ಪಾಲು ಹಂಚಿಕೆ
ಬೆಂಗಳೂರು, ನ.5 : ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಿದ ನಂತರ ಹೊಸ ವಿವಿಗಳಿಗೆ ಸೇರಬೇಕಾಗಿದ್ದ ಆಸ್ತಿಯ ಪಾಲನ್ನು ರಾಜ್ಯ ಸರಕಾರ ವಿಂಗಡನೆ ಮಾಡಿ ಹಂಚಿಕೆ ಮಾಡಿದೆ.
ಹೊಸ ವಿಶ್ವವಿದ್ಯಾಲಯಗಳಾದ ಬೆಂಗಳೂರು ಕೇಂದ್ರ ಮತ್ತು ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ ಸೇರಬೇಕಾಗಿರುವ ಆರ್ಥಿಕ, ಭೌತಿಕ, ಮಾನವ ಸಂಪನ್ಮೂಲವನ್ನು ವಿಂಗಡಿಸಿ ತಕ್ಷಣದಿಂದಲೇ ಆಸ್ತಿ ಪತ್ರಗಳನ್ನು ನೀಡುವಂತೆ ಸರಕಾರ ಆದೇಶಿಸಲಾಗಿದೆ.
ಆಸ್ತಿ ಹಂಚಿಕೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಕಳೆದ ವರ್ಷ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕರ ಆಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿಯು ಎರಡು ವಿವಿಗಳಿಗೆ ಮೂಲ ವಿವಿಯಿಂದ ಸೇರಬೇಕಾದ ಆರ್ಥಿಕ, ಭೌತಿಕ, ಮಾನವ ಸಂಪನ್ಮೂಲವನ್ನು ವಿಂಗಡನೆ ಮಾಡಿ ಎಷ್ಟು ಎಷ್ಟು ಸೇರಬೇಕು ಎಂಬುದರ ಸಮಗ್ರ ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ಹಂಚಿಕೆಯಾಗಿದೆ.
ವಿವಿಯ ಆದಾಯದ ಮೂಲವಾಗಿರುವ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೊತಿ ಸಭಾಂಗಣ ಯಾರಿಗೆ ಸೇರಬೇಕೆಂಬ ಗೊಂದಲವುಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿನ ವಿಜ್ಞಾನ ವಿಭಾಗದ ಕಟ್ಟಡದ ತಳ ಭಾಗ ಕೇಂದ್ರ ಮತ್ತು ಉತ್ತರ ವಿವಿ ಮೌಲ್ಯ ಮಾಪನಕ್ಕಾಗಿ ಬಳಕೆ ಮಾಡಿಕೊಳ್ಳಲು ನೀಡಿದ್ದರೆ, ಮೊದಲನೆಯ ಮತ್ತು ಎರಡನೇ ಮಹಡಿಗಳನ್ನು ಕೇಂದ್ರ ವಿವಿಗೆ ಬಿಟ್ಟುಕೊಡಲಾಗಿದೆ. ಸೆಂಟ್ರಲ್ ಕಾಲೇಜು ಆವರಣದ ಫ್ಯಾಷನ್ ಡಿಸೈನಿಂಗ್ ಮತ್ತು ಅಪೆರಲ್ ಟೆಕ್ನಾಲಜಿ ವಿಭಾಗವನ್ನು ಕೇಂದ್ರ ವಿವಿಗೆ ವರ್ಗಾವಣೆ ಮಾಡಬೇಕು ಎಂದು ಹೇಳಲಾಗಿದೆ. ಇನ್ನುಳಿದಂತೆ ಉತ್ತರ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ವಿವರವಾದ ಪ್ರಸ್ತಾವನೆ ಸಲ್ಲಿಸಬೇಕಿದೆ.
ವಿವಿಗಳಲ್ಲಿನ ಕಿತ್ತಾಟ: ಹೊಸ ವಿಶ್ವವಿದ್ಯಾಲಯಗಳಿಗೆ ಸೇರಬೇಕಾದ ಆಸ್ತಿ ಪತ್ರಗಳು ಮತ್ತು ವಿಭಾಗಗಳು ಅಧಿಕೃತವಾಗಿ ಪರಭಾರೆಯಾಗದಿರುವುದರಿಂದ ಮೂರು ವಿವಿಗಳ ನಡುವೆ ಪದೇಪದೆ ಜಗಳ ನಡೆಯುತ್ತಲೇ ಇದೆ. ಕಳೆದ ಬಾರಿ ಕೇಂದ್ರ ವಿವಿ ತನ್ನ ವ್ಯಾಪ್ತಿಯ ಕಾಲೇಜಿನಲ್ಲಿರುವ ಮೌಲ್ಯಮಾಪನ ಕೇಂದ್ರದ ಬೀಗ ಒಡೆದು ಸುಣ್ಣ-ಬಣ್ಣ ಹೊಡೆಸಲು ಮುಂದಾಗಿತ್ತು. ಇದರಿಂದ ಉಭಯ ವಿವಿಗಳ ಮಧ್ಯೆ ಆಡಳಿತಾತ್ಮಕವಾಗಿ ಕಚ್ಚಾಟ ಏರ್ಪಟ್ಟಿತ್ತು.
ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಎರಡು ವಿಶ್ವವಿದ್ಯಾಲಯಗಳಿಗೆ ಸರಕಾರ ಆಸ್ತಿ ಹಂಚಿಕೆ ಮಾಡಿದೆ. ಈ ಆಸ್ತಿಯ ಸಂಬಂಧ ಮೂಲ ವಿವಿಯಲ್ಲಿರುವ ದಾಖಲೆ ಪತ್ರಗಳನ್ನು ಶೀಘ್ರವಾಗಿ ಎರಡೂ ವಿಶ್ವವಿದ್ಯಾಲಯಗಳಿಗೆ ಸಲ್ಲಿಸಬೇಕು. ಸಲ್ಲಿಕೆಯಾಗಿರುವ ವರದಿಯನ್ನು ಸರಕಾರಕ್ಕೆ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ಮೂಲ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ. ವಿಳಂಬ ಮಾಡಿದಲ್ಲಿ, ಸಂಬಂಧಪಟ್ಟ ಅಧಿಕಾರಿ, ನೌಕರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.







