ಕನ್ನಡ ಕಲಿಸುವಂತೆ ಹೇಳುವ ಧೈರ್ಯ ಸರಕಾರಕ್ಕೆ ಬರಲಿ: ವೈದೇಹಿ

ಉಡುಪಿ, ನ.5: ಯಾವುದೇ ಪಕ್ಷದ ಸರಕಾರಗಳಿಗೂ ಕನ್ನಡದ ಬಗ್ಗೆ ಕಾಳಜಿಯೇ ಇಲ್ಲ. ನೆಲದ ಭಾಷೆಯನ್ನು ಎಲ್ಲ ಶಾಲೆಗಳಲ್ಲಿ ಕಲಿಸುವಂತೆ ಹೇಳುವ ಧೈರ್ಯ ಸರಕಾರಕ್ಕೆ ಬರಬೇಕು. ಕನ್ನಡ ಭಾಷೆ ಅಂದರೆ ನಾವೇ. ಹಾಗಾಗಿ ನಮ್ಮನ್ನು ನಾವೇ ಉಳಿಸಿಕೊಳ್ಳುವ ದಿನಗಳು ಎದುರಾಗಿವೆ ಎಂದು ಸಾಹಿತಿ ವೈದೇಹಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಸುಹಾಸಂ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಸಂಭ್ರಮದ ಅಂಗವಾಗಿ ಹೋಟೆಲ್ ಕಿದಿಯೂರಿನ ಪವನ್ ರ್ೂ ಟಾಪ್‌ನಲ್ಲಿ ಸೋಮವಾರ ಆಯೋಜಿಸಲಾದ ಕವಿಗೋಷ್ಟಿ, ಉಪನ್ಯಾಸ ಹಾಗೂ ಗೀತ ಗಾಯನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿರುವ ಸರಕಾರವೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪರವಾನಿಗೆ ನೀಡುತ್ತಿದೆ. ಇದರ ಪರಿಣಾಮ ಸರಕಾರ ಆಂಗ್ಲ ಮಾಧ್ಯಮ ಶಾಲೆಯ ಎದುರು ಸೋಲುತ್ತಿವೆ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪರ್ಸೆಂಟ್ ಪ್ರಕಾರ ಕನ್ನಡಕ್ಕೆ ಅವಕಾಶ ನೀಡಬೇಕು ಎಂದು ಕೇಳುತ್ತಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಭಾಷೆಯ ಕುರಿತ ಎಚ್ಚರ ನಮಗೆ ಇಂದಿಗೂ ಬಂದಿಲ್ಲ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತದೆ. ಕನ್ನಡದಲ್ಲಿ ಶಬ್ದಗಳೇ ಸಿಗುತ್ತಿಲ್ಲ ಎಂದು ಹೇಳು ತ್ತಿದ್ದಾರೆ. ಜನರೊಂದಿಗೆ ಒಡನಾಟ, ಸಮಾಜದೊಂದಿಗೆ ನೇರ ಸಂಪರ್ಕ, ಮಾತಿನ ಮೂಲಕ ಸಂವಹನ ಸಾಧಿಸುವುದರಿಂದ ಸಾಕಷ್ಟು ಶಬ್ದಗಳು ಸಿಗುತ್ತವೆ ಎಂದರು.
ಕನ್ನಡ ಈ ನೆಲದ ಯಾಜಮಾನ್ತಿ. ಆದರೆ ಇಂದು ಆಂಗ್ಲ ಭಾಷೆಯ ಸೇವಕಿ ಯಾಗುತ್ತಿದೆ. ಪರಿಸರದ ಭಾಷೆಯು ನಮ್ಮ ಆತ್ಮದ ಭಾಷೆಯಾಗಿದೆ. ನಾವಿಂದು ಆತ್ಮದ ಭಾಷೆಯೇ ಇಲ್ಲದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಆದುದರಿಂದ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಭಾಷೆ ಅಂದರೆ ಕೇವಲ ದುಡ್ಡು ಮಾಡುವ ಮಾರ್ಗ ಎಂಬಂತಾಗಿದೆ. ಆದುದರಿಂದ ಕನ್ನಡ ಭಾಷೆಗೆ ಅವಕಾಶ ಒದಗಿಸುವುದು ಮತ್ತು ಕನ್ನಡ ಶಾಲೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳ ಬೇಕು. ಅದರ ಜೊತೆ ಜನರು ಕೂಡ ಸೇರಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ನಾಡೋಜ ಪ್ರೊ.ಕೆ.ಪಿ.ರಾವ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ ಬೆಳಗೋಡು ರಮೇಶ್ ಭಟ್ ‘ಕನ್ನಡ ಬಳಸಿ ಕನ್ನಡ ಉಳಿಸಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕವಯತ್ರಿ ಜ್ಯೋತಿ ಗುರು ಪ್ರಸಾದ್ ಕಾರ್ಕಳ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಗೀತ ಗಾಯನ ಕಾರ್ಯಕ್ರಮದಡಿ ಕಾರ್ಕಡ ಸುರೇಶ್ ಕನ್ನಡ ಗೀತೆಗಳನ್ನು ಹಾಡಿದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ್ ಐತಾಳ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾ ರಾವ್ ಕಾರ್ಯಕ್ರಮ ನಿರೂಪಿಸಿದರು.







