ಚುನಾವಣಾ ರಾಜಕಾರಣ ಸಾಕಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.5: ಚುನಾವಣಾ ರಾಜಕಾರಣ ಸಾಕಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಇರುತ್ತೇನೆ. ಆದರೆ, ಚುನಾವಣಾ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪುನರುಚ್ಚರಿಸಿದ್ದಾರೆ.
ಸೋಮವಾರ ಎಫ್‌ಕೆಸಿಸಿಐ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ 13 ಚುನಾವಣೆಗಳನ್ನು ಎದುರಿಸಿದ್ದು, ಅದರಲ್ಲಿ 8 ಚುನಾವಣೆಗಳಲ್ಲಿ ಗೆದ್ದಿದ್ದೇನೆ. ಈಗ ನನಗೆ 71 ವರ್ಷ ವಯಸ್ಸಾಗಿದೆ. ಈಗಲೂ ಶಾಸಕನಾಗಿದ್ದೇನೆ. ಇದು ಮುಗಿಯಲು ನಾಲ್ಕೂವರೆ ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ 75 ವರ್ಷಗಳಾಗುತ್ತದೆ. ಹೀಗಾಗಿ, ನಾನು ಚುನಾವಣಾ ರಾಜಕಾರಣದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದರು.
ಅಧಿಕಾರ ಮಾಡಲಿಕ್ಕಾಗಿ ಅಥವಾ ಆಸ್ತಿ ಸಂಪಾದನೆ ಮಾಡಲು ನಾನು ರಾಜಕೀಯ ಜೀವನಕ್ಕೆ ಬಂದಿಲ್ಲ. ರಾಜಕೀಯ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು, ಯಾವ ಉದ್ದೇಶವನ್ನಿಟ್ಟುಕೊಂಡು ಬರುತ್ತೇವೆಯೋ ಅದನ್ನು ಪೂರ್ತಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ. ಬಡವರು, ಹಿಂದುಳಿದವರು, ಶೋಷಿತ ವರ್ಗದ ಜನರಿಗೆ ನ್ಯಾಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿದರು.
ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂ ಇರುತ್ತಾರೆ. ಅವರು ಪ್ರಗತಿಪರ ವಿಚಾರಗಳ ವಿರುದ್ಧವಿರುತ್ತಾರೆ. ಆದರೆ, ಈ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದ ಅವರು, ಸಿದ್ದರಾಮಯ್ಯ ಧರ್ಮವನ್ನು ಒಡೆದರು ಎಂದು ಆರೋಪಿಸುತ್ತಿದ್ದಾರೆ. ಆದರೆ, ನಾನೆಲ್ಲಿಯೂ ಧರ್ಮವನ್ನು ಒಡೆದಿಲ್ಲ. ಬಸವಣ್ಣ 800 ವರ್ಷಗಳ ಹಿಂದೆ ಮೌಢ್ಯವನ್ನು ವಿರೋಧಿಸಿ, ಕಾಯಕ ದಾಸೋಹ ಕಲಿಸಿದ್ದರು. ಇದೇ ದಾರಿಯಲ್ಲಿ ಬುದ್ಧ, ಅಂಬೇಡ್ಕರ್ ಇದ್ದರು. ಹೀಗಾಗಿ, ನಾನು ಇದೇ ಹಾದಿಯಲ್ಲಿ ನಡೆದಿದ್ದೇನೆ ಎಂಬ ಹೆಮ್ಮೆಯಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲ ಜಾತಿ, ಧರ್ಮಗಳ ಪರವಾಗಿ ಕೆಲಸ ಮಾಡಿದ್ದರೂ, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿದ್ದು ಸರಿಯಲ್ಲ. ಜನರು ಸಂಕುಚಿತ ಮನೋಭಾವದಿಂದ ನೋಡುವುದನ್ನು ಬಿಡಬೇಕು. ಬಸವಣ್ಣರ ವಿಚಾರಧಾರೆಗಳನ್ನು ಅನುಸರಿಸಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದರು ಎಂದರು.
ಸಿದ್ದರಾಮಯ್ಯರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಯಿತು. ಆದರೆ, ಅವರನ್ನು ರಾಜಕೀಯವಾಗಿ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್, ನಿಜಲಿಂಗಪ್ಪರಿಗೂ ಸಿದ್ದರಾಮಯ್ಯ ಅಚ್ಚುಮೆಚ್ಚಾಗಿದ್ದರು. ಅಲ್ಲದೆ, ಜೆಡಿಎಸ್ ರಾಷ್ಟ್ರೀಯ ನಾಯಕರಿಗೂ ಅಂದು-ಇಂದು ಬೇಕಾದ ವ್ಯಕ್ತಿಯಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ, ಅವರು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣ ಪ್ರವೇಶಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ, ಹಿರಿಯ ಉಪಾಧ್ಯಕ್ಷ ಸಿ.ಆರ್.ಜನಾರ್ಧನ, ಉಪಾಧ್ಯಕ್ಷ ಪೆರಿಕಲ್ ಎಂ.ಸುಂದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







