ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ರಾಜೇಶ್ವರಿ ಶೆಟ್ಟಿಗೆ ಶರ್ತಬದ್ಧ ಜಾಮೀನು ಮಂಜೂರು

ಉಡುಪಿ, ನ.5: ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಶರ್ತಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಪ್ರಕರಣದ ತನಿಖಾಧಿಕಾರಿ ಸಲ್ಲಿಸಿದ ಮಾಹಿತಿಯಂತೆ ಒಟ್ಟು 167 ಸಾಕ್ಷಿಗಳ ಪೈಕಿ ಪ್ರಮುಖ 36 ಸಾಕ್ಷಿಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣ ಗೊಳಿಸಿ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್ ಎ. 23ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಅದರಂತೆ ಜು .2ರಿಂದ ಸಾಕ್ಷಗಳ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಆರಂಭಿಸಲಾಗಿತ್ತು. ಇಂದು ನಡೆದ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎನ್‌ಎ ವಿಭಾಗದ ಸಹಾಯಕ ನಿರ್ದೇಶಕ ಎಲ್. ಪುರುಷೋತ್ತಮ ಅವರ ಪಾಟಿ ಸವಾಲನ್ನು ಆರೋಪಿ ಪರ ವಕೀಲ ಹೈದರಬಾದಿನ ಜಿ.ವಿ.ರಾವ್ ನೆರವೇರಿಸುವ ಮೂಲಕ ಒಟ್ಟು 40 ಸಾಕ್ಷಗಳ ವಿಚಾರಣೆಯನ್ನು ಪೂರ್ಣಗೊಳಿಸಲಾಯಿತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈಗಾಗಲೇ 36 ಸಾಕ್ಷಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಆರೋಪಿ ರಾಜೇಶ್ವರಿ ಶೆಟ್ಟಿಗೆ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಆರೋಪಿ ತಂಗಿ ಮತ್ತು ಸಂಬಂಧಿಯೊಬ್ಬರ ಶ್ಯೂರಿಟಿಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ಯಾವುದೇ ಕಾರಣಕ್ಕೂ ಸಾಕ್ಷಗಳಿಗೆ ಬೆದರಿಕೆ ಅಥವಾ ಪ್ರಭಾವ ಬೀರಬಾರದು. ಪ್ರತಿ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ಭಾರತ ದೇಶ ಬಿಟ್ಟು ಹೊರಗೆ ಹೋಗಬಾರದು ಎಂಬ ಶರ್ತವನ್ನು ನ್ಯಾಯಾಲಯ ಆರೋಪಿ ರಾಜೇಶ್ವರಿ ಶೆಟ್ಟಿಗೆ ವಿಧಿಸಿದೆ.
ಈ ಸಂದರ್ಭದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ, ಆರೋಪಿ ಪರ ವಕೀಲರಾದ ನಾರಾಯಣ ಪೂಜಾರಿ ಹಾಗೂ ಅರುಣ್ ಬಂಗೇರ ಹಾಜರಿದ್ದರು. ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ರಾಜೇಶ್ವರಿ ಶೆಟ್ಟಿ ಎರಡು ಮೂರು ದಿನಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಆಸ್ತಿ ಹಾಗೂ ಅನೈತಿಕ ಸಂಬಂಧದ ವಿಚಾರದಲ್ಲಿ ಭಾಸ್ಕರ್ ಶೆಟ್ಟಿಯನ್ನು ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ 2016ರ ಜು. 28ರಂದು ಕೊಲೆ ಮಾಡಿ, ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆ ಹೋಮ ಕುಂಡದಲ್ಲಿ ಸುಟ್ಟಿದ್ದರು. ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ನೀಡಿದ ದೂರಿನಂತೆ ಆ. 7ರಂದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅಂದಿನಿಂದ ಅಂದರೆ ಎರಡು ವರ್ಷ ಮೂರು ತಿಂಗಳಗಳ ಕಾಲ ಜೈಲಿನಲ್ಲಿದ್ದ ರಾಜೇಶ್ವರಿ ಶೆಟ್ಟಿಗೆ ಇದೀಗ ಬಿಡುಗಡೆ ಭಾಗ್ಯ ದೊರೆತಿದೆ. ಆದರೆ ಮಗ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಜೈಲಿನಲ್ಲಿಯೇ ಇದ್ದಾರೆ.







