ದೀಪಾವಳಿ ಅಜ್ಞಾನದ ಕತ್ತಲನ್ನು ಹೋಗಲಾಡಿಸಲಿ: ಬಿಷಪ್
ಉಡುಪಿ, ನ.5: ಸಂಸ್ಕೃತಿಯ ಸೊಬಗನ್ನು ಅರಿತು ಶ್ರದ್ಧೆಯಿಂದ ದೀಪಾವಳಿ ಆಚರಿಸಿದರೆ ಈ ಸಡಗರದ-ಸಂಭ್ರಮದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮ, ಸಡಗರದ ವಾತಾವರಣ ಮನೆಯಲ್ಲಿ ಸಂತೋಷವನ್ನು ತುಂಬುತ್ತವೆ ಎಂದು ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಲೋಬೊ ಹೇಳಿದ್ದಾರೆ.
ದೀಪಾವಳಿ ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ದೀಪಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯನ್ನು ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ. ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ ಎಂದು ಅವರು ತಮ್ಮ ದೀಪಾವಳಿ ಸಂದೇಶ ದಲ್ಲಿ ತಿಳಿಸಿದ್ದಾರೆ.
ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ (ಪ್ರಕಾಶ) ಅವಶ್ಯಕ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ ಅವರು ಅವರು ಹೇಳಿದ್ದಾರೆ.
ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದವನ್ನು ಪ್ರಾಪ್ತಿ ಮಾಡಿ ಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ. ಸುಖ ಶಾಂತಿ, ನಲಿವು, ಜ್ಞಾನದ ಸೌಹಾರ್ದತೆಯ ಸಂಕೇತವಾದ ದೀಪಾವಳಿಯನ್ನು ಆತ್ಮದೀಪವ ಬೆಳಗಿಸಿ ಅನ್ಯರಿಗೂ ಜ್ಞಾನದೀಪವನ್ನು ದಾನ ಮಾಡಿ ಆಚರಿಸೋಣ. ನಮ್ಮೆಲ್ಲಾ ಸಹೋದರ-ಸಹೋದರರಿಗೆ ದೀಪಾವಳಿ ಹಬ್ಬದ ಶುಭ ಹಾರೈಕೆಗಳು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.







