ಖಶೋಗಿ ಹತ್ಯೆ ಘೋರ ಕೃತ್ಯ; ಸೌದಿ ಸ್ಥಿರತೆಯೂ ಮುಖ್ಯ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ವರ್ನ (ಬಲ್ಗೇರಿಯ), ನ. 5: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯನ್ನು ಇಸ್ತಾಂಬುಲ್‌ನ ಸೌದಿ ಕೌನ್ಸುಲೇಟ್ ಕಚೇರಿಯಲ್ಲಿ ಹತ್ಯೆ ಮಾಡಿರುವುದು ಘೋರ ಕೃತ್ಯವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಆದರೆ, ಅದೇ ವೇಳೆ, ಸೌದಿ ಅರೇಬಿಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದೂ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಬಲ್ಗೇರಿಯ ಭೇಟಿಯ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಶೋಗಿ ಹತ್ಯೆಗೆ ಸಂಬಂಧಿಸಿದಂತೆ ಇದು ಇಸ್ರೇಲ್‌ನ ಮೊದಲ ಸಾರ್ವಜನಿಕ ಹೇಳಿಕೆಯಾಗಿದೆ.
‘‘ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯ ಕೌನ್ಸುಲೇಟ್ ಕಚೇರಿಯಲ್ಲಿ ಏನು ನಡೆಯಿತೋ, ಅದು ಘೋರ ಕೃತ್ಯವಾಗಿದೆ. ಅದನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸಬೇಕಾಗಿದೆ. ಆದರೆ, ಅದೇ ವೇಳೆ, ಈ ವಲಯ ಮತ್ತು ಜಗತ್ತಿನ ಸ್ಥಿರತೆಗಾಗಿ ಸೌದಿ ಅರೇಬಿಯ ಸ್ಥಿರವಾಗಿ ಉಳಿಯುವುದು ಅಗತ್ಯವಾಗಿದೆ’’ ಎಂದರು.
‘‘ಈ ಎರಡೂ ಗುರಿಗಳನ್ನು ಸಾಧಿಸಲು ದಾರಿಯೊಂದನ್ನು ಕಂಡುಹಿಡಿಯಬೇಕು ಎಂದು ನನಗನಿಸುತ್ತದೆ. ಯಾಕೆಂದರೆ, ನಾನು ಭಾವಿಸಿರುವಂತೆ, ದೊಡ್ಡ ಸಮಸ್ಯೆ ಇರಾನ್ ಆಗಿದೆ. ಯುರೋಪ್‌ನಲ್ಲಿ ಕಳೆದ ಕೆಲವು ವಾರಗಳಲ್ಲಿ ಅದು ನಡೆಸಿಕೊಂಡು ಬರುತ್ತಿರುವ ಅಪಪ್ರಚಾರ ಅಭಿಯಾನವನ್ನು ನಾವು ನಿಲ್ಲಿಸಬೇಕಾಗಿದೆ’’ ಎಂದು ಇಸ್ರೇಲ್ ಪ್ರಧಾನಿ ನುಡಿದರು.
ಖಶೋಗಿ ಹತ್ಯೆಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಟೀಕೆಗಳು ಹೆಚ್ಚುತ್ತಿರುವ ಹೊರತಾಗಿಯೂ, ಅವರನ್ನು ಬೆಂಬಲಿಸುವುದನ್ನು ಮುಂದುವರಿಸುವಂತೆ ಇಸ್ರೇಲ್ ಇತ್ತೀಚೆಗೆ ಶ್ವೇತಭವನವನ್ನು ಒತ್ತಾಯಿಸಿದೆ ಎಂಬುದಾಗಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದ ಒಂದು ದಿನದ ಬಳಿಕ, ಇಸ್ರೇಲ್ ಪ್ರಧಾನಿಯ ಈ ಹೇಳಿಕೆಗಳು ಹೊರಬಿದ್ದಿವೆ.ಖಶೋಗಿ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದರು.
ಖಶೋಗಿ ಹಂತಕರಿಗೆ ಶಿಕ್ಷೆ ವಿಶ್ವಸಂಸ್ಥೆಗೆ ಸೌದಿ ಅರೇಬಿಯ ಭರವಸೆ
ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯ ಬಗ್ಗೆ ಸೌದಿ ಅರೇಬಿಯ ತನಿಖೆ ನಡೆಸುತ್ತಿದೆ ಹಾಗೂ ಕೊಲೆಗಾರರನ್ನು ಅದು ಶಿಕ್ಷಿಸಲಿದೆ ಎಂದು ಸೌದಿ ಅರೇಬಿಯವು ಸೋಮವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಸೋಮವಾರ ತಿಳಿಸಿದೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಭಾಷಣ ಮಾಡಿದ ಸೌದಿ ಅರೇಬಿಯದ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಬಂದಾರ್ ಅಲ್ ಐಬನ್ ಈ ವಿಷಯ ತಿಳಿಸಿದರು.







