ನಿರ್ಮಾಣ್ ಶೆಲ್ಟರ್ಸ್‌ನಿಂದ ‘ಕ್ರೀಡಾ ಉತ್ಸವ’

ಬೆಂಗಳೂರು, ನ.5: ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಆಗಿರುವ ನಿಟ್ಟಿನಲ್ಲಿ ಎಲ್ಲರೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲು ನಗರದ ಬನ್ನೇರುಘಟ್ಟ ರಸ್ತೆಯ ನಿರ್ಮಾಣ್ ಶೆಲ್ಟರ್ಸ್ ನಿರ್ಮಿಸಿರುವ ನಿಸರ್ಗ ಬಡಾವಣೆಯಲ್ಲಿ ನವೆಂಬರ್ ತಿಂಗಳ ಪೂರ್ತಿ ಕ್ರೀಡಾ ಉತ್ಸವ ಜರುಗಲಿದೆ.
ನಿಸರ್ಗ ಬಡಾವಣೆಯ ಪಶ್ಚಿಮ ದ್ವಾರದ ಭದ್ರತಾ ಕಚೇರಿಯ ಮುಂಭಾಗದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಿ, ಸೆಂಟ್ ಜೋಸೆಫ್ ಶಾಲಾ ಮಕ್ಕಳ ಜೊತೆಯಲ್ಲಿ ಪಥ ಸಂಚಲನದೊಂದಿಗೆ ಎಲ್‌ಎನ್ ಹೊರಾಂಗಣ ಕ್ರೀಡಾಂಗಣದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಕುರಿತು ಮಾತನಾಡಿದ ಜಿಗಣಿ ಆರಕ್ಷಕ ಠಾಣೆಯ ನಿರೀಕ್ಷಕ ಸಿದ್ದೇಗೌಡ, ನಗರದ ಬಡಾವಣೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ, ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಪ್ತೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕ್ರೀಡೆಯು ವೈಯಕ್ತಿಕವಾಗಿ ಸಾಧನೆಗೆ ಅವಕಾಶ ಒದಗಿಸುವುದರ ಜೊತೆಯಲ್ಲಿ ಆರೋಗ್ಯ ಭಾಗ್ಯವನ್ನೂ ಕರುಣಿಸುತ್ತದೆ ಎಂದರು.
ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ವಿ.ಲಕ್ಷ್ಮೀ ನಾರಾಯಣ್ ಮಾತನಾಡಿ, ಮಾನಸಿಕವಾಗಿ, ದೈಹಿಕವಾಗಿ ಸದೃಢತೆಯಿಂದಿರಲು ಕ್ರೀಡೆ ಅಗತ್ಯ. ಇದರಿಂದ ಉತ್ತಮ ಸಮಾಜದ ನಿರ್ಮಾಣವೂ ಅಗಬಹುದು. ಶಾಲಾ ಹಂತದಲ್ಲಿ ಪ್ರತಿಯೊಂದು ಶಾಲೆಯ ಮಕ್ಕಳು ಇಂತಹ ಕ್ರೀಡಾಕೂಟದಲ್ಲಿ ಭಾಗ ವಹಿಸುವಂತಾಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ರೆಡ್ ಬ್ರಿಡ್ಜ್ ಇಂಟರ್ ನ್ಯಾಷನಲ್ ಅಕಾಡೆಮಿ ಅಧಿಕಾರಿಗಳಾದ ಪೆಮ್ ಲಚುಂಗ್ಪಾ, ಕಾಸ್, ನಿಸ್ವಾರ್ಥ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ಎಂ. ಭಾರತಿ ವಿಎಲ್‌ಎನ್ ಕ್ರೀಡಾ ಸಮಿತಿ ಸಂಚಾಲಕ ಮೈಕೊ ನಾಗರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







