ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಎಲ್ಗಾರ್ ಪರಿಷದ್ ಭಾಷಣಗಳು ಕಾರಣ: ಪುಣೆ ಪೊಲೀಸ್

ಪುಣೆ,ನ.5: ಜನವರಿ ಒಂದರಂದು ಪುಣೆಯ ಭೀಮಾ ಕೊರೆಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಘಟನೆಯ ಒಂದು ದಿನ ಮೊದಲು ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಮಾಡಿದಂಥ ಪ್ರಚೋದನಕಾರಿ ಭಾಷಣಗಳೇ ಕಾರಣ ಎಂದು ಪುಣೆ ಪೊಲೀಸರು ನ್ಯಾಯಾಂಗ ಆಯೋಗದ ಮುಂದೆ ತಿಳಿಸಿದ್ದಾರೆ.
ಹಿಂಸಾಚಾರದ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ನಿವೃತ್ತ ನ್ಯಾಯಾಧೀಶ ಜೆ.ಎನ್. ಪಟೇಲ್ ನೇತೃತ್ವದಲ್ಲಿ ರಚಿಸಿರುವ ತನಿಖಾ ಆಯೋಗಕ್ಕೆ ಪುಣೆ ಪೊಲೀಸರು ಈ ಕುರಿತು ಅಫಿದಾವಿತ್ ಸಲ್ಲಿಸಿದ್ದಾರೆ. 1818ರಲ್ಲಿ ಪೇಶ್ವಾ ಸೇನೆಯ ವಿರುದ್ಧ ದಲಿತ ಸೈನಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಬ್ರಿಟಿಷ್ ಸೇನೆ ಸಾಧಿಸಿದ್ದ ಗೆಲುವಿನ ಸ್ಮರಣಾರ್ಥ ಕಳೆದ ವರ್ಷ ಡಿಸೆಂಬರ್ 31ರಂದು ಪುಣೆಯ ಶನಿವಾರ್ ವಡದಲ್ಲಿ ಎಲ್ಗಾರ್ ಪರಿಷದ್ ಆಯೋಜಿಸಲಾಗಿತ್ತು. ಮರುದಿನ ಜನವರಿ ಒಂದರಂದು ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ನಡೆದಿತ್ತು ಮತ್ತು ದಲಿತರು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 3ರಂದು ಮಹಾರಾಷ್ಟ್ರ ಬಂದ್ ಕೂಡಾ ನಡೆದಿತ್ತು.
ಪುಣೆ ಪೊಲೀಸರು ನಡೆಸಿದ ತನಿಖೆಯಲ್ಲಿ ಎಲ್ಗಾರ್ ಪರಿಷದ್ ಒಂದು ಸಂಚಿನ ಭಾಗವಾಗಿರುವುದು ಕಂಡುಬಂದಿದೆ. ಇದರ ಸಮ್ಮೇಳನದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದು ಇದರ ಒಟ್ಟಾರೆ ಫಲವಾಗಿ ಮರುದಿನ ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಶಿಶಿರ್ ಹಿರೆ ತಿಳಿಸಿದ್ದಾರೆ.
ಈ ಅಫಿದಾವಿತ್‌ನೊಂದಿಗೆ ಪೊಲೀಸರು ಆ ದಿನದ ಭಾಷಣಗಳ ತುಣುಕುಗಳು ಮತ್ತು ಹಂಚಲಾದ ಪುಸ್ತಕಗಳ ಪ್ರತಿಗಳನ್ನು ಜೋಡಿಸಿದ್ದು ಇವುಗಳಲ್ಲಿ ಪ್ರಚೋದನಕಾರಿ ಮಾತುಗಳ ಜೊತೆಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತು ಹಾಕಲು ಹಿಂಸೆಯ ವಿಧಾನಗಳನ್ನು ಅನುಸರಿಸುವ ಬಗ್ಗೆ ತಿಳಿಸಲಾಗಿದೆ ಎಂದು ಶಿಶಿರ್ ಮಾಹಿತಿ ನೀಡಿದ್ದಾರೆ.







