ಟಿಪ್ಪು ಜಯಂತಿಗೆ ಹೆಚ್ಚಿನ ಭದ್ರತೆ: ಪೊಲೀಸ್ ಆಯುಕ್ತ ಸುರೇಶ್
ಮಂಗಳೂರು, ನ.5: ಟಿಪ್ಪು ಜಯಂತಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲಾ ಪಂಚಾಯತ್ ಆವರಣದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ಭದ್ರತೆ ಕಲ್ಪಿಸಲಾಗುವುದು. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ನೀಡಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಭಾಸ್ಕರ್ ಒಕ್ಕಲಿಗ ಉಪಸ್ಥಿತರಿದ್ದರು.
‘ನಿಯಮ ಮೀರಿ ಪಟಾಕಿ ಸಿಡಿಸಿದರೆ ಕ್ರಮ’
ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾತ್ರಿ 8ರಿಂದ 10ಗಂಟೆಯತನಕ ಮಾತ್ರ ಸಿಡಿಮದ್ದು ಪ್ರದರ್ಶನಕ್ಕೆ ಅವಕಾಶ. ಒಂದು ವೇಳೆ ನಿಯಮ ಮೀರಿ ಪಟಾಕಿ ಸಿಡಿಸಿದರೆ ಅಂತಹವರ ಬಗ್ಗೆ ಮಾಹಿತಿ ನೀಡಿದರೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.
ಸರಕಾರ ಪಟಾಕಿ ಸಿಡಿಸಿ ಶಬ್ದ ಮಾಲಿನ್ಯ, ವಾಯುಮಾಲಿನ್ಯವಾಗದಂತೆ ತಡೆಯಲು ಸೂಚನೆ ನೀಡಿದ್ದು ಈ ಹಿನ್ನೆಲೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ಪಟಾಕಿಗಳ ಮಾರಾಟಕ್ಕೆ 92 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 47 ಅರ್ಜಿಗಳ ದಾಖಲೆ ಪರಿಶೀಲನೆ ನಡೆಸಿ ಪರವಾನಿಗೆ ನೀಡಲಾಗಿದೆ. ಉಳಿದ ಅರ್ಜಿಗಳ ನಿರಪೇಕ್ಷಣಾ ಪತ್ರ ಬಂದ ಬಳಿಕ ಪರವಾನಿಗೆ ನೀಡಲಾಗುವುದು ಎಂದರು.







