ಚಿಕ್ಕಮಗಳೂರು: ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ

ಚಿಕ್ಕಮಗಳೂರು ನ.5: ಪ್ರತಿ ವರ್ಷದಂತೆ ಈ ಬಾರಿಯು ನವೆಂಬರ್ 10 ರಂದು ಟಿಪ್ಪು ಜಯಂತಿಯನ್ನು ಜಿಲ್ಲಾಡಳಿತದಿಂದ ಆಚರಿಸಲು ಸಿದ್ದತೆ ನಡೆಸಿದೆ. ಟಿಪ್ಪು ಜಯಂತಿ ಆಚರಣೆ ಕುರಿತಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಯ ಮುಖಂಡರು ಹಾಗೂ ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಸೋಮವಾರ ಜಿಲ್ಲಾಧಿಕಾರಿ ಎಂ.ಕೆ ಶ್ರೀರಂಗಯ್ಯ, ಎಸ್ಪಿ ಹರೀಶ್ ಪಾಂಡೆ ಸಭೆ ನಡೆಸಿದರು.
ಟಿಪ್ಪು ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವು ಆಚರಿಸಲಾಗುವುದು. ಈ ಸಂಬಂಧ ಎಲ್ಲಾ ಸಿದ್ದತೆಗಳ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನವಂಬರ್ 10 ರಂದು ಕುವೆಂಪು ಕಲಾಮಂದಿರದಲ್ಲಿ ಸಭಾ ಕಾರ್ಯಕ್ರಮವು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗುವುದು. ಸಭಾ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಎಲ್ಲಾ ಜನಪ್ರತಿನಿಧಿಗಳು, ಗಣ್ಯರನ್ನು ಆಹ್ವಾನಿಸಲಾಗುವುದು ಹಾಗೂ ಟಿಪ್ಪು ಕುರಿತಂತೆ ಪರಿಣಿತರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಟಿಪ್ಪು ಜಯಂತಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್‍ಪಾಂಡೆ ಮಾತನಾಡಿ, ಟಿಪ್ಪು ಜಯಂತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಸುದ್ದಿಗಳು ಬಂದಲ್ಲಿ ಯುವ ಜನರು ಗೊಂದಲಕೊಳಗಾಗದೆ ಪೊಲೀಸ್ ಇಲಾಖೆಗೆ ದೂರು ನೀಡಬೇಕು. ಇದರ ಬಗ್ಗೆ ಸಮಾಜದ ಮುಖಂಡರು ಯುವ ಜನರಿಗೆ ತಿಳಿಹೇಳಬೇಕು ಎಂದರು.
ಸಭೆಯಲ್ಲಿ ಬ್ಯಾರಿ ಒಕ್ಕೂಟದ ಅಧ್ಯಕ್ಷ ಕೆ. ಮಹಮ್ಮದ್ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಂಜುನಾಥ್ ಜೋಷಿ, ಜೈನ ಸಮಾಜದ ಅಧ್ಯಕ್ಷ ಗೌತಮ್ ಚಂದ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅತೀಕ್ ಕೈಸರ್, ಕಾರ್ಯದರ್ಶಿ ಜಬೇದ್ ಉಲ್ಲಾ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಮುಖಂಡರುಗಳಾದ ಕೆ.ಟಿ ರಾಧಾಕೃಷ್ಣ ಜಂಶಿದ್ ಖಾನ್, ಗೌಸ್ ಮೊಹಿಯುದ್ದಿನ್, ಅಬ್ದುಲ್ ರೆಹಾಮಾನ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







