ಡಿ.1ರಿಂದ ನಗರ ಆಸ್ತಿ ನೋಂದಣಿಗೆ ಪಿ.ಆರ್. ಕಾರ್ಡ್ ಕಡ್ಡಾಯ
ಮಂಗಳೂರು, ನ.5: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗ್ರಾಮಗಳಲ್ಲಿ ಡಿ.1ರಿಂದ ಆಸ್ತಿಗಳ ಕ್ರಯ/ಪರಭಾರೆ/ದಾನ, ಇತ್ಯಾದಿ ವಹಿವಾಟುಗಳ ನೋಂದಣಿ ಸಮಯದಲ್ಲಿ ತಯಾರಿಸಲ್ಪಡುವ ದಸ್ತಾವೇಜಿನಲ್ಲಿ ನಗರಾಸ್ತಿ ಮಾಲಕತ್ವದ ಹಕ್ಕುದಾಖಲೆಗಳ ಯೋಜನೆ (ಯುಪಿಒಆರ್) ಪಿ.ಆರ್. ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ.
ಈ ಬಗ್ಗೆ ಪ್ರಕಟನೆ ಹೊರಡಿಸಿರುವ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪಾಲಿಕೆ ವ್ಯಾಪ್ತಿಯ 32 ಗ್ರಾಮಗಳಲ್ಲಿ ಈ ತನಕ ದಾಖಲೆ ನೀಡದೇ ಇರುವ ಅಪಾರ್ಟ್‌ಮೆಂಟ್ ಸೇರಿದಂತೆ ಎಲ್ಲ ಆಸ್ತಿ ಮಾಲಕರು ತಮ್ಮ ಮಾಲಕತ್ವದ ದಾಖಲೆಗಳನ್ನು ನಗರ ಮಾಪನ ಯೋಜನಾಧಿಕಾರಿಗಳ ಕಚೇರಿ, ಮಿನಿವಿಧಾನ ಸೌಧ ಆವರಣ ಮಂಗಳೂರು. ದೂ.ಸಂ.: 0824-4266222 ಕಚೇರಿಗೆ ಅಥವಾ ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳಕ್ಕೆ ಬರುವ ಸಿಬ್ಬಂದಿಯವರಲ್ಲಿ ನೀಡಬೇಕು ಎಂದು ತಿಳಿಸಿದ್ದಾರೆ.
ಕ್ರಯಪತ್ರ/ ಭೂನ್ಯಾಯ ಮಂಡಳಿ ತೀರ್ಪು ದರ್ಖಾಸ್ತು ಆದೇಶ ನಡವಳಿ/ ರಿಜಿಸ್ಟ್ರಿ ನಕಾಶೆ ಹಾಗೂ ಇತರ ಪತ್ರ, ಭೂಪರಿವರ್ತನೆ ಆದೇಶ, ಪಹಣಿ ಪತ್ರ ಅಥವಾ ಕಾರ್ಪೊರೇಶನ್ ಖಾತಾಪತ್ರ ಭೂಪರಿವರ್ತಿತ ನಕ್ಷೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪ್ರತಿ, ಅಪಾರ್ಟ್‌ಮೆಂಟ್ ಆಗಿದ್ದಲ್ಲಿ ಡೀಡ್ ಆಫ್ ಡಿಕ್ಲೆರೇಷನ್, ಕಟ್ಟಡದ ಪ್ರಾರಂಭಿಕ ಪ್ರಮಾಣಪತ್ರ, ಕಟ್ಟಡದ ಪ್ರವೇಶ ಪತ್ರ, ಅನುಮೋದಿತ ಕಟ್ಟಡದ ಪ್ಲಯಾನ್ ಇತರ ಅವಶ್ಯ ದಾಖಲಾತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.





