ನ. 10-11: ಪಿಲಿಕುಳದಲ್ಲಿ ಪರಿಸರ ಸ್ನೇಹಿ ದೀಪಾವಳಿ-ಆಹಾರ ಮೇಳ
ಮಂಗಳೂರು, ನ.5: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ದೀಪಾವಳಿಯ ಸಂಭ್ರಮದ ಅರಿವನ್ನು ಮೂಡಿಸುವ ಆಚರಿಸುವ ಸಲುವಾಗಿ ಲೇಕ್ ಗಾರ್ಡನ್‌ನಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರ ಸ್ನೇಹಿ ದೀಪಾವಳಿ ಮತ್ತು ಆಹಾರ ಮೇಳವನ್ನು ನ.10 ಹಾಗೂ 11ರಂದು ವೈವಿಧ್ಯಮಯ ಆಕರ್ಷಣೆಗಳೊಂದಿಗೆ ಆಯೋಜಿಸಲಾಗಿದೆ.
ನ.10ರಂದು ಸಂಜೆ 4ರಿಂದ 7 ಗಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗೂಡುದೀಪ ಪಂಥವು ಸಾಂಪ್ರಾದಾಯಿಕ ಹಾಗೂ ಆಧುನಿಕ ವಿಭಾಗ ಗಳಲ್ಲಿ ನಡೆಯಲಿದೆ. ಸಾಂಪ್ರಾದಾಯಿಕ ವಿಭಾಗದ ಗೂಡುದೀಪ ತಯಾರಿಯಲ್ಲಿ ಬಟ್ಟೆ, ಬಣ್ಣದ ಕಾಗದ, ಗ್ಲಾಸ್ ಪೇಪರ್‌ಗಳನ್ನು ಮತ್ತು ಆಧುನಿಕ ವಿಭಾಗಕ್ಕೆ ನವಧಾನ್ಯ, ಫ್ಲೆಕ್ಸ್, ಪ್ಲಾಸ್ಟಿಕ್, ಗರಿ, ಹೂ ಇತ್ಯಾದಿ ಉಪಯೋಗಿಸಿರಬೇಕು.
ಸ್ಪರ್ಧಾಳುಗಳು ಮೇಲಿನ ದಿನಾಂಕದಂದು ಅಪರಾಹ್ನ 2 ಗಂಟೆಯೊಳಗೆ ತಮ್ಮ ಆಯ್ಕೆಯ ವಿಭಾಗಳನ್ನು ಸ್ಥಳದಲ್ಲಿಯೇ ನೋಂದಾಯಿಸಬೇಕು. ಗೂಡುದೀಪಗಳನ್ನು ನೋಡಿ ವಿಭಾಗಗಳನ್ನು ನಿರ್ಣಯಿಸಲಾಗುವುದು. ಗೂಡುದೀಪಕ್ಕೆ ಬೇಕಾದ ಬಲ್ಬ್, ಹೋಲ್ಡರ್, ವೈರ್, ಪ್ಲಗ್ ಇತ್ಯಾದಿಗಳನ್ನು ಸ್ಪರ್ಧಾಳು ಗಳು ಸ್ವತಃ ತರಬೇಕು. ಹೆಚ್ಚಿನ ಮಾಹಿತಿಗಾಗಿ ಮುಂಚಿತವಾಗಿ 7899687937, 7829581031ನ್ನು ಸಂಪರ್ಕಿಸಬಹುದಾಗಿದೆ.
ಚೆಂಡೆಮೇಳ: ಇದೇ ವೇಳೆಯಲ್ಲಿ ಕೆರಿಯರ್ ಡೆಸ್ಟಿನಿ ಸಹಯೋಗದಲ್ಲಿ ನಡೆಯಲಿರುವ ಚೆಂಡೆಮೇಳ ದುಂದುಭಿ ಚೆಂಡೆ ಸ್ಪರ್ಧೆ ನಡೆಯಲಿದೆ. ಮುಂಚಿತವಾಗಿ ನೋಂದಣಿಗಾಗಿ 9148758589, 9483054605, 9742454909ನ್ನು ಸಂಪರ್ಕಿಸಬಹುದಾಗಿದೆ.
ಅದೇ ದಿನಾಂಕದಂದು ಸಂಜೆ 6 ಗಂಟೆಯಿಂದ 6:30ರ ಅವಧಿಯಲ್ಲಿ ಸಾಂಪ್ರದಾಯಿಕ ಹಣತೆ ಬೆಳಗುವ ಸ್ಪರ್ಧೆಯು ನಡೆಯಲಿದೆ. 2 ನಿಮಿಷಗಳಲ್ಲಿ ಅತಿಹೆಚ್ಚು ಹಣತೆ ಬೆಳಗಿಸುವವರನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು. ಸ್ಥಳದಲ್ಲಿಯೇ ನೋಂದಣಿ ವ್ಯವಸ್ಥೆ ಮಾಡಲಾಗುವುದು. ಎಲ್ಲ ವಿಭಾಗ ಗಳಲ್ಲೂ ವಿಜೇತರಾದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.
ವಿಶೇಷ ಆಕರ್ಷಣೆಯಾಗಿ ನ.10 ಹಾಗೂ 11ರಂದು ಲೇಕ್ ಗಾರ್ಡನ್‌ನಲ್ಲಿ ಬೆಳಗ್ಗೆ 11ರಿಂದ ಸಂಜೆ 7 ಗಂಟೆ ವರೆಗೆ ತುಳುನಾಡಿನ ಸಾಂಪ್ರದಾಯಿಕ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳನ್ನು ಸ್ಥಳದಲ್ಲಿಯೇ ತಯಾರಿಸಿ ಪ್ರದರ್ಶಿಸಿ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







