ದಾವಣಗೆರೆ: ಎಕ್ಸಿಸ್ ಬ್ಯಾಂಕ್ ಗೆ ಬೀಗ ಜಡಿದು ಪ್ರತಿಭಟನೆ
ವಾರಂಟ್ ಹಿಂಪಡೆಯಲು ರಾಜ್ಯ ರೈತ ಸಂಘ, ಹಸಿರು ಸೇನೆ ಆಗ್ರಹ

ದಾವಣಗೆರೆ,ನ.5: ರೈತರಿಗೆ ನೋಟೀಸ್ ನೀಡಿ, ಕೇಸ್ ದಾಖಲಿಸಿ, ವಾರಂಟ್ ಹೊರಡಿಸಲು ಕಾರಣವಾದ ಎಕ್ಸಿಸ್ ಬ್ಯಾಂಕ್‍ನ ಶಾಖೆಗಳಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ರೇಣುಕಾ ಮಂದಿರ ಪಕ್ಕದ ಎಕ್ಸಿಸ್ ಬ್ಯಾಂಕ್, ಹದಡಿ ರಸ್ತೆಯ ಶಾಖೆಗಳ ಎದುರು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ರೈತ ಮುಖಂಡರು, ರೈತರು ಎಕ್ಸಿಸ್ ಬ್ಯಾಂಕ್‍ನ ದುರ್ನಡತೆ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಬೆಳಗಾವಿ ರೈತರಿಗೆ ನೊಟೀಸ್ ನೀಡಿ, ಕೊಲ್ಕತ್ತಾ, ಚೆನ್ನೈ ನ್ಯಾಯಾಲಯಗಳಿಂದ ವಾರಂಟ್ ಹೊರಡಿಸಲು ಕಾರಣವಾದ ಎಕ್ಸಿಸ್ ಬ್ಯಾಂಕ್ ಉದ್ಧಟತನ ಪ್ರದರ್ಶಿಸುತ್ತಿದೆ. ರಾಜ್ಯ ಸರ್ಕಾರವು ರೈತರಿಗೆ ನೊಟೀಸ್ ನೀಡದಂತೆ, ಬಲವಂತದ ಸಾಲ ವಸೂಲಿ ಮಾಡದಂತೆ ಆದೇಶ ಹೊರಡಿಸಿದ್ದರೂ ಅದನ್ನು ಧಿಕ್ಕರಿಸಿರುವ ಎಕ್ಸಿಸ್ ಬ್ಯಾಂಕ್‍ನ್ನು ರಾಜ್ಯದಿಂದಲೇ ಓಡಿಸಲಾಗುವುದು ಎಂದ ಅವರು, ಕೊಲ್ಕತ್ತಾ, ಚೆನ್ನೈ ಸೇರಿದಂತೆ ವಿವಿಧೆಡೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದು, ಸಾಲ ಕಟ್ಟುವಂತೆ ನೊಟೀಸ್ ಕಳಿಸುವುದು, ಹಳ್ಳಿಗಳಿಗೆ ತೆರಳಿ ಬಲವಂತದ ಸಾಲ ವಸೂಲಿ ಮಾಡಲು ಪ್ರಯತ್ನಿಸುವುದನ್ನು ಮಾಡುತ್ತಿದೆ. ಇನ್ನು ಮುಂದೆ ಎಕ್ಸಿಸ್ ಬ್ಯಾಂಕ್ ಇಂತಹ ಕೆಲಸಕ್ಕೆ ಕೈ ಹಾಕಿದರೆ ರಾಜ್ಯದಿಂದಲೇ ಎಕ್ಸಿಸ್ ಬ್ಯಾಂಕ್‍ನ್ನು ಓಡಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ನೋಟೀಸ್ ನೀಡದಂತೆ, ಬಲವಂತ ಸಾಲ ವಸೂಲಿ ಮಾಡದಂತೆ, ಕೇಸ್ ದಾಖಲಿಸದಂತೆ ಎಚ್ಚರಿಸಿದ್ದಾರೆ. ಆದರೆ, ಎಕ್ಸಿಸ್ ಬ್ಯಾಂಕ್‍ನವರು ರಾಜ್ಯ ಸರ್ಕಾರದ ಆದೇಶದ ವಿರುದ್ಧ ಉದ್ಧಟತನ ಪ್ರದರ್ಶಿಸುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾತನಾಡಿ, ಸಾಲ ಪಡೆದ ರೈತರಿಗೆ ನೋಟೀಸ್, ವಾರಂಟ್ ನೀಡುವ ಮೂಲಕ ಎಕ್ಸಿಸ್ ಬ್ಯಾಂಕ್ ಉದ್ಧಟತನ ಪ್ರದರ್ಶಿಸಿದೆ. ಇದರ ವಿರುದ್ಧ ರಾಜ್ಯಾದ್ಯಂತ ಎಕ್ಸಿಸ್ ಬ್ಯಾಂಕ್‍ಗಳ ಎದುರು ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ನಡೆಸಿವೆ. ಎಕ್ಸಿಸ್ ಬ್ಯಾಂಕ್ ಅನ್ನದಾತ ರೈತರ ವಿಚಾರದಲ್ಲಿ ಸೌಜನ್ಯದಿಂದ ವರ್ತಿಸದಿದ್ದರೆ ಕರ್ನಾಟಕದಿಂದಲೇ ಎಕ್ಸಿಸ್ ಬ್ಯಾಂಕನ್ನು ಓಡಿಸಬೇಕಾದೀತು. ತಕ್ಷಣವೇ ಬೆಳಗಾವಿ ರೈತರ ವಿರುದ್ಧದ ಕೇಸ್ ಹಿಂಪಡೆಯಲಿ ಎಂದು ಆಗ್ರಹಿಸಿದರು.
ಇಲ್ಲಿನ ಪಿ.ಬಿ. ರಸ್ತೆಯ ರೇಣುಕಾ ಮಂದಿರ ಎದುರಿನ ಶಾಖೆ ಹಾಗೂ ಹದಡಿ ರಸ್ತೆ ಶಾಖೆ ಎದುರು ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟಿಸಿದವು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಿನ್ನಸಮುದ್ರ ಶೇಖರ ನಾಯ್ಕ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಹುಚ್ಚವ್ವನಹಳ್ಳಿ ಗಣೇಶ, ಹುಚ್ಚವ್ವನಹಳ್ಳಿ ಶೇಖರಪ್ಪ, ಹೆದ್ನೆ ಅಂಜಿನಪ್ಪ, ಹೊನ್ನೂರು ರಾಜು, ಮಲ್ಲೇನಹಳ್ಳಿ ಅಜ್ಜಯ್ಯ, ಅಣ್ಣಪ್ಪ ಕಣಿವೆಬಿಳಚಿ, ಸಂತೋಷ ನಾಯ್ಕ, ಖಲೀಮುಲ್ಲಾ ಇದ್ದರು.







