ರೈತರಿಗೆ ನ್ಯಾಯಾಲಯದಿಂದ ಬಂಧನ ವಾರಂಟ್‍ಗೆ ಖಂಡನೆ: ಮಂಡ್ಯ ಎಕ್ಸಿಸ್ ಬ್ಯಾಂಕ್‍ಗೆ ರೈತಸಂಘ ಮುತ್ತಿಗೆ

ಮಂಡ್ಯ, ನ.5: ಕೃಷಿ ಸಾಲ ಪಡೆದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಐವರು ರೈತರಿಗೆ ಎಕ್ಸಿಸ್ ಬ್ಯಾಂಕ್ ನ್ಯಾಯಾಲಯದ ಮೂಲಕ ಬಂಧನದ ವಾರಂಟ್ ಹೊರಡಿಸಿರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ಸೋಮವಾರ ನಗರದ ಎಕ್ಸಿಸ್ ಬ್ಯಾಂಕ್‍ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಸತತ 13 ವರ್ಷಗಳ ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಕಳೆದ 3 ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಜೀವನ ನಡೆಸಲು ತೊಂದರೆಗೊಳಗಾಗಿದ್ದಾರೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‍ಗಳು ಸಾಲಕ್ಕೆ ನೊಟೀಸ್ ನೀಡಿ ಮತ್ತಷ್ಟು ಕಿರುಕುಳ ನೀಡುತ್ತಿವೆ ಎಂದು ಅವರು ಕಿಡಿಕಾರಿದರು.
1994ರಲ್ಲೇ ರೈತ ನಾಯಕ, ಹೋರಾಟಗಾರ ದಿ.ಪ್ರೊ.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಖಾಸಗಿ ವಿದೇಶಿ ಬ್ಯಾಂಕುಗಳನ್ನು ನಮ್ಮ ದೇಶದಿಂದ ಹೊರ ಹೋಗಬೇಕೆಂದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಖಾಸಗಿ ಬ್ಯಾಂಕ್‍ಗಳು ದುಬಾರಿ ಬಡ್ಡಿ ದರ ವಿಧಿಸಿ ರೈತರನ್ನು ಶೋಷಣೆ ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ರೈತರಿಗೆ ದುಬಾರಿ ಬಡ್ಡಿ ದರ ವಿಧಿಸಿ ಬಲವಂತವಾಗಿ ಸಾಲ ವಸೂಲಿ ಮಾಡಲು ಎಕ್ಸಿಸ್ ಬ್ಯಾಂಕ್ ಕೊಲ್ಕತ್ತಾ ನ್ಯಾಯಾಲಯದಿಂದ ಬಂಧನ ಆದೇಶ ಜಾರಿ ಮಾಡಿರುವುದು ಖಂಡನೀಯ. ಕೂಡಲೇ ಬಂಧನ ಆದೇಶ ಜಾರಿಯನ್ನು ವಾಪಸ್ ಪಡೆಯಬೇಕು ಎಂದು ಅವರು ಬ್ಯಾಂಕ್‍ನ ವ್ಯವಸ್ಥಾಪಕ ಕೃಷ್ಣಮೂರ್ತಿ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡುತ್ತೇವೆಂದು ಘೋಷಣೆ ಮಾಡಿ ರೈತರನ್ನು ವಂಚಿಸುತ್ತಿದೆ. ಬರಿ ಸುಳ್ಳು ಆಶ್ವಾಸನೆ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದೂ ಪ್ರತಿಭಟನಾಕಾರರು ದೂರಿದರು.
ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ ಮಾತನಾಡಿ, ಬೆಳಗಾವಿ ರೈತರಿಗೆ ಬಂಧನ ವಾರೆಂಟ್ ನೀಡಿರುವುದು ಖಂಡನೀಯ. ಸಿಎಂ ಕುಮಾರಸ್ವಾಮಿ ಅವರು ಚುನಾವಣೆ ಪೂರ್ವದ ದಿನಗಳಿಂದಲೂ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಆದೇಶ ಜಾರಿಗೊಳಿಸಿಲ್ಲ. ರೈತರ ಸಾಲಮನ್ನಾ ಚುನಾವಣೆ ಪ್ರಚಾರ, ಸಮಾವೇಶಗಳಿಗೆ ಮಾತ್ರ ಸೀಮಿತವಾಗಿದೆ. ರೈತರ ಹಿತ ಕಾಯುವಲ್ಲಿ ಸಮ್ಮಿಶ್ರ ಸರಕಾರ ಎಡವಿದೆ ಎಂದು ಆರೋಪಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಎಕ್ಸಿಸ್ ಬ್ಯಾಂಕ್ ರೈತರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ಖಾಸಗಿ ಬ್ಯಾಂಕ್‍ಗಳಿಗೆ ರೈತರನ್ನು ಬಲಿಕೊಡುತ್ತಿವೆ. ಇದೇ ರೀತಿ ಮುಂದುವರೆದರೆ ರಾಜ್ಯಾದ್ಯಂತ ಸಂಘಟನೆಯ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ಮಾತನಾಡಿ, ವಿಜಯ ಮಲ್ಯ, ನೀರವ್ ಮೋದಿ ಒಳಗೊಂಡಂತೆ ದೇಶಬಿಟ್ಟು ಪರಾರಿಯಾಗಿರುವ ಇತರ ಉದ್ಯಮಿಗಳಿಗೆ ನೊಟೀಸ್ ಜಾರಿಗೊಳಿಸಲಾಗದ ಬ್ಯಾಂಕ್‍ಗಳು ರೈತರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ ಎಂದು ಕಿಡಿಕಾರಿದರು. ರೈತರ ಬಗ್ಗೆ ಕಾಳಜಿಯಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ರೈತರ ಸಾಲಮನ್ನಾದ ಹಣವನ್ನು ಬ್ಯಾಂಕ್ ಖಾತೆಗಳಿಗೆ ತುಂಬಬೇಕು ಎಂದು ತಾಕೀತು ಮಾಡಿದರು.
ಬಿ.ಬೊಮ್ಮೇಗೌಡ, ರಾಮಕೃಷ್ಣಯ್ಯ, ಲತಾಶಂಕರ್, ಹರೀಶ್ ಹಲ್ಲೇಗೆರೆ, ಶೆಟ್ಟಿಹಳ್ಳಿ ರವಿಕುಮಾರ್, ಇಂಡುವಾಳು ಸಿದ್ದೇಗೌಡ, ಮರಿಚನ್ನೇಗೌಡ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







