ಎನ್‌ಡಿಎಯ ಬೆಳೆ ವಿಮೆ ಯೋಜನೆ ರಫೇಲ್‌ಗಿಂತಲೂ ದೊಡ್ಡ ಹಗರಣ: ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಆರೋಪ

ಅಹಮದಾಬಾದ್,ನ.5: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ರೈತರಿಗಾಗಿ ರೂಪಿಸಿರುವ ಬೆಳೆ ವಿಮೆ ಯೋಜನೆ ರಫೇಲ್‌ಗಿಂತಲೂ ದೊಡ್ಡ ಹಗರಣವಾಗಿದೆ ಎಂದು ಖ್ಯಾತ ಪತ್ರಕರ್ತ ಮತ್ತು ರೈತಪರ ಹೋರಾಟಗಾರ ಪಿ. ಸಾಯಿನಾಥ್ ಆರೋಪಿಸಿದ್ದಾರೆ.
ಪ್ರಸ್ತುತ ಸರಕಾರದ ನೀತಿಗಳು ರೈತವಿರೋಧಿಯಾಗಿವೆ. ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ರಫೇಲ್ ಹಗರಣಕ್ಕಿಂತಲೂ ದೊಡ್ಡದಾದ ಹಗರಣವಾಗಿದೆ. ಈ ಯೋಜನೆಯಲ್ಲಿ ಬೆಳೆ ವಿಮೆ ನೀಡುವ ಕಾರ್ಯವನ್ನು ರಿಲಾಯನ್ಸ್, ಎಸ್ಸರ್ ಮುಂತಾದ ಆಯ್ದ ಕಂಪೆನಿಗಳಿಗೆ ಒಪ್ಪಿಸಲಾಗಿದೆ ಎಂದು ಸಾಯಿನಾಥ್ ಆರೋಪಿಸಿದ್ದಾರೆ. ದೇಶದ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಪರಿಹಾರವನ್ನು ಚರ್ಚಿಸಲು ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಅವರು ಈ ಆರೋಪವನ್ನು ಮಾಡಿದ್ದಾರೆ.
ಕಳೆದ 20 ವರ್ಷಗಳಲ್ಲಿ ಪ್ರತಿದಿನ 2,000 ರೈತರು ಕೃಷಿಯನ್ನು ತೊರೆಯುತ್ತಿದ್ದಾರೆ. ರೈತರು ನಿಧಾನವಾಗಿ ತಮ್ಮ ಜಮೀನನ್ನು ಕಾರ್ಪೊರೇಟ್‌ಗಳಿಂದಾಗಿ ಕಳೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಶೇ. 55 ಜನರು ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿದ್ದರೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ತನ್ನಲ್ಲಿರುವ ನಗದನ್ನು ಕೃಷಿಯೇ ಇಲ್ಲದಿರುವ ಮುಂಬೈಯಲ್ಲಿ ಹಂಚುತ್ತಿದೆ ಎಂದು ಸಾಯಿನಾಥ್ ತಿಳಿಸಿದ್ದಾರೆ. 1995ರಿಂದ 2015ರ ಅವಧಿಯಲ್ಲಿ 3.10 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ ಸಾಯಿನಾಥ್, ರೈತರ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬ ಬಗ್ಗೆಯೂ ವಿವರಣೆ ನೀಡಿದ್ದಾರೆ. ಜೊತೆಗೆ ದಿಲ್ಲಿಯಲ್ಲಿ ಬೃಹತ್ ಧರಣಿ ಮತ್ತು ಮೆರವಣಿಗೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.







