ಈಡನ್ ಗಾರ್ಡನ್ ನಲ್ಲಿ ಅಝರುದ್ದೀನ್ ಗೆ ಗಂಟೆ ಬಾರಿಸಲು ಅನುಮತಿಸಿದ್ದಕ್ಕೆ ಗಂಭೀರ್ ಆಕ್ಷೇಪ

ಹೊಸದಿಲ್ಲಿ, ನ.5: ರವಿವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಆರಂಭದ ಮುನ್ನ ಟೀಂ ಇಂಡಿಯಾದ ಮಾಜಿ ಕಪ್ತಾನ ಅಝರುದ್ದೀನ್ ಅವರಿಗೆ ಮೈದಾನದಲ್ಲಿನ ಗಂಟೆ ಬಾರಿಸಲು ಅನುಮತಿಸಿದ್ದಕ್ಕೆ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
`ಕಳಂಕಿತ' ಕ್ರಿಕೆಟಿಗನೊಬ್ಬನಿಗೆ ಇಂತಹ ಅವಕಾಶವೊದಗಿಸಿದ್ದಕ್ಕಾಗಿ ಅವರು ಬಿಸಿಸಿಐ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಹಾಗೂ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತಕ್ಕಾಗಿ 99 ಟೆಸ್ಟ್ ಪಂದ್ಯ ಹಾಗೂ 334 ಏಕದಿನ ಪಂದ್ಯಗಳನ್ನು ಆಡಿರುವ ಅಝರುದ್ದೀನ್ ಅವರ ಮೇಲೆ 2004ರ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನಿಷೇಧ ಹೇರಿತ್ತು. ಆದರೆ ಈ ನಿಷೇಧವನ್ನು ಆಂಧ್ರ ಪ್ರದೇಶ ಹೈಕೋರ್ಟ್ 2013ರಲ್ಲಿ ತೆರವುಗೊಳಿಸಿತ್ತು.
``ಭಾರತ ಇಂದು ಈಡನ್‍ನಲ್ಲಿ ಗೆದ್ದಿರಬಹುದು ಆದರೆ ನನಗೆ ವಿಷಾದವಿದೆ. ಭ್ರಷ್ಟಾಚಾರ ಸಹಿಸದೇ ಇರುವ ಬಿಸಿಸಿಐ ನೀತಿ ರವಿವಾರ ರಜೆ ತೆಗೆದುಕೊಂಡಿದೆ. ಇದು ಆಘಾತಕಾರಿ. ಗಂಟೆ ಬಾರಿಸುತ್ತಿದೆ. ಅಧಿಕಾರದಲ್ಲಿರುವವರು ಕೇಳಿಸಿಕೊಳ್ಳುತ್ತಿದ್ದಾರೆಂದು ಅಂದುಕೊಂಡಿದ್ದೇನೆ'' ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ತಮ್ಮ ಮೇಲಿನ ನಿಷೇಧ ತೆರವುಗೊಂಡಂದಿನಿಂದ ಅಝರುದ್ದೀನ್ ಕ್ರಿಕೆಟ್ ಆಡಳಿತಾತ್ಮಕ ವಿಚಾರಗಳಲ್ಲಿ ಆಸಕ್ತಿ ತೋರಿಸಿದ್ದಾರೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಚುನಾವಣೆಗೆ ಸ್ಪರ್ಧಿಸಲು ಅವರು ಯತ್ನಿಸಿದ್ದರೂ ಅವರ ಮೇಲಿನ ನಿಷೇಧದ ಕುರಿತಂತೆ ಸ್ಪಷ್ಟನೆಯಿಲ್ಲದೇ ಇದ್ದುದರಿಂದ ಮಂಡಳಿ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಈ ವರ್ಷ ಬಿಸಿಸಿಐ ಅವರಿಗೆ ಚುನಾವಣೆ ಸ್ಪರ್ಧಿಸಲು ಅನುಮತಿಸಿತ್ತಲ್ಲದೆ ಅವರು ಯಾವುದೇ ಹುದ್ದೆ ಹೊಂದಲು ನಿಷೇಧವಿಲ್ಲ ಎಂದಿತ್ತು.







