ಹಸಿರು ದೀಪಾವಳಿ ಆಚರಿಸಿದ ವೃಂದಾವನದ ವಿಧವೆಯರು

ವೃಂದಾವನ (ಉ.ಪ್ರ),ನ.5: ಉತ್ತರ ಪ್ರದೇಶದ ವೃಂದಾವನದ ವಿಧವೆಯರು ರವಿವಾರ ಗೋಪಿನಾಥ ದೇವಸ್ಥಾನದಲ್ಲಿ ಹಸಿರು ದೀಪಾವಳಿಯನ್ನು ಆಚರಿಸಿದರು. ಈ ವೇಳೆ ಬಣ್ಣಬಣ್ಣದ ಮಣ್ಣಿನ ದೀಪಗಳನ್ನು ಉರಿಸಿದ ಅವರು ಚಿತ್ತಾಕರ್ಷಕ ರಂಗೋಲಿಗಳನ್ನು ಬಿಡಿಸಿದರು.
ಆಚರಣೆಯ ಭಾಗವಾಗಿ ಅವರಲ್ಲಿ ಹಲವರು ಸಾಂಪ್ರದಾಯಿಕ ಶ್ಲೋಕಗಳನ್ನು ಹಾಡಿದರು. ಇಲ್ಲಿನ ಬಹುತೇಕ ವಿಧವೆಯರು ತಮ್ಮ 90ನೇ ಹರೆಯದಲ್ಲಿದ್ದು 400 ವರ್ಷಗಳಷ್ಟು ಹಳೆಯ ದೇವಸ್ಥಾನದಲ್ಲಿ ಮಾಲಿನ್ಯರಹಿತ ಹಬ್ಬಾಚರಣೆಯಲ್ಲಿ ಭಾಗವಹಿಸಿದರು. ಈ ವಿಧವೆಯರ ಮುಸ್ಸಂಜೆಯ ವರ್ಷಗಳಲ್ಲಿ ಅವರ ಮುಖದಲ್ಲಿ ನಗುವನ್ನು ತರುವ ಉದ್ದೇಶದಿಂದ ಬೆಳಕಿನ ಹಬ್ಬವನ್ನು ಆಚರಿಸುವ ನಿರ್ಧಾರವನ್ನು ನಾವು ಮಾಡಿದೆವು ಎಂದು ವೃಂದಾವನದ ಸುಮಾರು 900 ವಿಧವೆಯರನ್ನು ನೋಡಿಕೊಳ್ಳುತ್ತಿರುವ ಲಾಭರಹಿತ ಸಂಸ್ಥೆಯ ಸದಸ್ಯರಾದ ಬಿಂದೇಶ್ವರ್ ಪಾಠಕ್ ತಿಳಿಸಿದ್ದಾರೆ.
ಕಳೆದ ವರ್ಷ ದೀಪಾವಳಿಯ ಮರುದಿನ ರಾಷ್ಟ್ರ ರಾಜಧಾನಿಯ ವಾಯು ಮಾಲಿನ್ಯ ಮಟ್ಟದಲ್ಲಿ ಉಂಟಾದ ಗಂಭೀರ ಏರಿಕೆಯ ಕುರಿತು ಸರ್ವೋಚ್ಚ ನ್ಯಾಯಾಲಯ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಮಾಲಿನ್ಯರಹಿತ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಪಾಠಕ್ ಅವರ ಸಂಸ್ಥೆಯು ಸತತ ಆರನೇ ವರ್ಷ ವೃಂದಾವನದಲ್ಲಿ ದೀಪಾವಳಿಯನ್ನು ಆಚರಿಸುತ್ತಿದೆ. ಇದರ ಜೊತೆಗೆ ಈ ಸಂಸ್ಥೆ ವಿಧವೆಯರಿಗಾಗಿ ಹೋಲಿ, ರಕ್ಷಾ ಬಂಧನ ಮತ್ತು ದುರ್ಗಾ ಪೂಜೆಯನ್ನೂ ಆಚರಿಸುತ್ತದೆ.





