ಭಗವದ್ಗೀತೆಯೊಂದಿಗೆ ಮನೆಗೆ ತೆರಳಿದ ಭಾರತದ ಜೈಲಿನಿಂದ ಬಿಡುಗಡೆಗೊಂಡ ಪಾಕ್ ಪ್ರಜೆ

ವಾರಣಾಸಿ,ನ.5: ಭಾರತದ ವಾರಣಾಸಿಯ ಜೈಲಿನಲ್ಲಿ ಬಂಧಿಯಾಗಿದ್ದ ಪಾಕಿಸ್ತಾನ ಪ್ರಜೆ ಜಲಾಲುದ್ದೀನ್ ಹದಿನಾರು ವರ್ಷಗಳ ಬಳಿಕ ಬಿಡುಗಡೆಗೊಂಡಿದ್ದು ಭಗವದ್ಗೀತೆಯೊಂದಿಗೆ ತನ್ನ ಮನೆಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಾರಣಾಸಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ 2001ರಲ್ಲಿ ವಾಯುಪಡೆ ಕಚೇರಿಯ ಸಮೀಪ ಸಂಶಯಾಸ್ಪದ ದಾಖಲೆಗಳನ್ನು ಹಿಡಿದು ಸುತ್ತಾಡುತ್ತಿದ್ದ ಪಾಕಿಸ್ತಾನದ ಸಿಂಧ್ ಪ್ರಾಂತದ ಜಲಾಲುದ್ದೀನ್‌ನನ್ನು ಬಂಧಿಸಲಾಗಿತ್ತು. ಆತನಿಂದ ಕಂಟೋನ್ಮೆಂಟ್ ಪ್ರದೇಶದ ಹಾಗೂ ಇತರ ಪ್ರಮುಖ ಪ್ರದೇಶಗಳ ನಕ್ಷೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ನ್ಯಾಯಾಲಯವು ಜಲಾಲುದ್ದೀನ್‌ಗೆ ಹದಿನಾರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಬಂಧನಕ್ಕೊಳಗಾದ ಸಂದರ್ಭದಲ್ಲಿ ಜಲಾಲುದ್ದೀನ್ ಕೇವಲ ಪ್ರೌಢ ಶಿಕ್ಷಣ ಪಡೆದಿದ್ದ. ನಂತರ ಆತ ಇಲ್ಲಿನ ಇಂದಿರಾ ಗಾಂಧಿ ಓಪನ್ ವಿಶ್ವವಿದ್ಯಾನಿಲಯದಲ್ಲಿ ಎಂಎ ಪದವಿ ಮುಗಿಸಿದ.
ಆನಂತರ ಜೈಲಿನಲ್ಲೇ ಇದ್ದು ಇಲೆಕ್ಟ್ರಾನಿಕ್ಸ್ ಕೋರ್ಸ್ ಕೂಡಾ ಮಾಡಿದ. ಕಳೆದ ಮೂರು ವರ್ಷಗಳಿಂದ ಆತ ಜೈಲಿನ ಕ್ರಿಕೆಟ್ ಪಂದ್ಯಾಟಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ವಾರಣಾಸಿ ಕೇಂದ್ರ ಕಾರಾಗೃಹದ ಹಿರಿಯ ವರಿಷ್ಠಾಧಿಕಾರಿ ಅಂಬರೀಶ್ ಗೌಡ್ ತಿಳಿಸಿದ್ದಾರೆ.





