ಜೋರು ಧ್ವನಿಯಲ್ಲಿ ಹಾಡು ಹಾಕಿದ್ದ ವ್ಯಕ್ತಿಯ ಥಳಿಸಿ ಹತ್ಯೆಗೈದ ಪೊಲೀಸರು

ಮುಂಬೈ, ನ.5: ಗಟ್ಟಿ ಧ್ವನಿಯಲ್ಲಿ ಹಾಡು ಹಾಕಿದ್ದಕ್ಕೆ ಟ್ರ್ಯಾಕ್ಟರ್ ಚಾಲಕನನ್ನು ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಥಳಿಸಿ ಹತ್ಯೆಮಾಡಿರುವರೆಂದು ಆರೋಪಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರದೀಪ್ ಕೂಟೆ (24 ವರ್ಷ) ತನ್ನ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಕ್ಕರೆ ಕಾರ್ಖಾನೆಯತ್ತ ಹೋಗುತ್ತಿದ್ದಾಗ ಗಟ್ಟಿ ಧ್ವನಿಯಲ್ಲಿ ಹಾಡು ಹಾಕಿದ್ದ. ಈತನನ್ನು ಮನೆಗಾಂವ್ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ತಡೆದ ಕಾನ್‌ಸ್ಟೇಬಲ್‌ಗಳಾದ ದಶರಥ್ ಕುಂಭಾರ್ ಹಾಗೂ ದೀಪಕ್ ಶ್ರೀಸಾಗರ್ ಗಟ್ಟಿ ಧ್ವನಿಯಲ್ಲಿ ಹಾಡು ಹಾಕಿದ್ದಕ್ಕೆ ಆಕ್ಷೇಪಿಸಿ ಥಳಿಸಿದ್ದಾರೆ. ಆಗ ಪ್ರದೀಪ್ ಪ್ರಜ್ಞೆ ಕಳೆದುಕೊಂಡು ನೆಲಕ್ಕುರುಳಿದ್ದಾನೆ ಎನ್ನಲಾಗಿದೆ.
ಬಳಿಕ ಕಾನ್‌ಸ್ಟೇಬಲ್‌ಗಳು ಪ್ರದೀಪ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಬಳಿಕ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ಪೋಷಕರು ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿದ್ದು ಮಧ್ಯಪ್ರವೇಶಿಸಿದ ಅಧಿಕಾರಿಗಳು ಆರೋಪಿ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







