ಹೊಸ 19 ಎಐಐಎಂಎಸ್‌ಗಳಲ್ಲಿ ಆಯುರ್ವೇದ ವಿಭಾಗ ಆರಂಭ: ನಾಯ್ಕ್
ಹೊಸದಿಲ್ಲಿ, ನ.5: ಎಲ್ಲಾ ಹೊಸ 19 ಎಐಐಎಂಎಸ್‌ಗಳಲ್ಲೂ ಆಯುರ್ವೇದ ವಿಭಾಗಗಳನ್ನು ಆರಂಭಿಸಲಾಗುವುದು ಎಂದು ಆಯುಷ್ ಸಚಿವಾಲಯದ ಉಪಸಚಿವ ಶ್ರೀಪಾದ ಯೆಸ್ಸೊ ನಾಕ್ ತಿಳಿಸಿದ್ದಾರೆ.
ಹೊಸದಾಗಿ ಆರಂಭಿಸಲಾಗಿರುವ 19 ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಗಳಲ್ಲಿ ಆಯುರ್ವೇದ ವಿಭಾಗಗಳನ್ನು ಆರಂಭಿಸಲಾಗುವುದು . ಬಿಎಸ್‌ಎಫ್ ಹಾಗು ಇತರ ಅರೆಸೇನಾ ಪಡೆಗಳ ಏಳು ಆಸ್ಪತ್ರೆಗಳಲ್ಲಿ ಆಯುರ್ವೇದ ವಿಭಾಗ ಆರಂಭಿಸಲು ಗೃಹ ಇಲಾಖೆ ಅನುಮೋದನೆ ನೀಡಿದೆ. 100 ಇಎಸ್‌ಐ ಆಸ್ಪತ್ರೆಗಳಲ್ಲಿ ಆಯುರ್ವೇದ ವಿಭಾಗಗಳನ್ನು ಆರಂಭಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ. 3ನೇ ಆಯುರ್ವೇದ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮವನ್ನು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಜತೆ ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು.
ಸಾರ್ವಜನಿಕರ ಆರೋಗ್ಯಕ್ಕಾಗಿ ಆಯುರ್ವೇದ ಎಂಬ ಉಪಕ್ರಮದಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ರಾಷ್ಟ್ರೀಯ ಕಾರ್ಯಕ್ರಮವನ್ನು ಈಗಿರುವ ಆರು ರಾಜ್ಯಗಳ ವ್ಯಾಪ್ತಿಗಿಂತ ವಿಸ್ತರಿಸಲು ನಿರ್ಧರಿಸಲಾಗಿದೆ. ಆಯುರ್ವೇದ ಮತ್ತು ಆಯುಷ್ ಕ್ಷೇತ್ರದಲ್ಲಿ ಉದ್ಯಮದ ಅವಕಾಶವನ್ನು ಹೆಚ್ಚಿಸಲು ಎಂಎಸ್‌ಎಂಇ ಸಚಿವಾಲಯದ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಆಯುಷ್ ವೈದ್ಯಪದ್ಧತಿ ಹಾಗೂ ಆಧುನಿಕ ಚಿಕಿತ್ಸಾ ಪದ್ಧತಿಯ ವೈಜ್ಞಾನಿಕ ಸಮೀಕಣದ ಅಗತ್ಯವಿದೆ . ಪರಿಸರ ಇಲಾಖೆಯು ಸಂಶೋಧನಾ ಕಾರ್ಯಕ್ಕೆ ಎಲ್ಲಾ ಸಹಕಾರ ನೀಡುತ್ತದೆ ಎಂದು ಪರಿಸರ ಇಲಾಖೆಯ ಸಚಿವ ಹರ್ಷವರ್ಧನ ತಿಳಿಸಿದರು.







