ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ: ಮಂಡ್ಯ ಜಿಲ್ಲಾಡಳಿತದಿಂದ ಪೂರ್ವಭಾವಿ ಸಭೆ

ಮಂಡ್ಯ, ನ.5: ನಗರದ ಅಂಬೇಡ್ಕರ್ ಭವನದಲ್ಲಿ ನ.10 ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಯಿತು.
ಟಿಪ್ಪು ಸುಲ್ತಾನ್ ಜಯಂತಿಯನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಣೆ ಮಾಡಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಜಿಲ್ಲಾಡಳಿತದ ವತಿಯಿಂದ ಶಿಷ್ಟಾಚಾರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಸಾಹಿತಿಗಳಾದ ಅರೇನಹಳ್ಳಿ ಧಮೇಂದ್ರಕುಮಾರ್ ಹಾಗೂ ಮಲಾನ ಹಬಿದುಲ್ ಹಸನ್ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ, ಕಾರ್ಯಕ್ರಮಕ್ಕೆ ಬರುವವರಿಗೆ ಸಿಹಿ ವಿತರಣೆ, ಆಹ್ವಾನ ಪತ್ರಿಕೆ ಸಿದ್ಧತೆಯ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕಿ ಶಾಂತಮ್ಮ ಅವರಿಗೆ ಹೇಳಿದರು.
ಶ್ರೀರಂಗಪಟ್ಟಣಕ್ಕೆ ಹೊರಗಿನ ಜಿಲ್ಲೆಯಿಂದ ಹೆಚ್ಚು ಜನರು ಬರುವುದರಿಂದ ಸಮುದಾಯದ ಮುಖಂಡರು ಸ್ವಯಂಸೇವಕರನ್ನು ಅಲ್ಲಿ ನಿಯೋಜಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಸಮುದಾಯದ ಮುಖಂಡರುಗಳು ಸ್ಥಳದಲ್ಲಿದ್ದು ಪೊಲೀಸ್ ಇಲಾಖೆಯೊಂದಿಗೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ್ ದೇವರಾಜು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಮುದಾಯದ ಮುಖಂಡರ ಸಹಕಾರ ಅಗತ್ಯವಾಗಿದೆ. ನ.10 ರಂದು ನಗರದಲ್ಲಿ ಮೆರವಣೆಗೆ ಮಾಡುವುದು, ಸಾಮೂಹಿಕವಾಗಿ ಬೈಕ್‍ಗಳಲ್ಲಿ ಬಾವುಟ ಕಟ್ಟಿಕೊಂಡು ಬರುವುದು ಹಾಗೂ ಘೋಷಣೆ ಕೂಗುವುದಕ್ಕೆ ಅವಕಾಶವಿರುವುದಿಲ್ಲ. ಬ್ಯಾನರ್ ಗಳನ್ನು ಕಟ್ಟಲು ನಗರಸಭೆಯಿಂದ ಅನುಮತಿ ಪಡೆಯಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಹಾಗೂ ಎಂ.ಬಿ.ಶ್ರೀನಿವಾಸ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.







